ADVERTISEMENT

ರಾಯಸಧನ ನಕಲಿ ಪರ್ಮಿಟ್‌ ತಯಾರಿಸುತ್ತಿದ್ದ ಜಾಲ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 10:38 IST
Last Updated 8 ಡಿಸೆಂಬರ್ 2018, 10:38 IST
ಅಕ್ರಮ ಮರಳು ಸಾಗಾಣಿಕೆಗೆ ನಕಲಿ ರಾಯಸಧನ ಪರ್ಮಿಟ್‌ ಮಾಡಿಕೊಟ್ಟು ಬಂಧನಕ್ಕೊಳಗಾದ ಆರೋಪಿಗಳು ಮತ್ತು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ರಾಯಚೂರು ಜಿಲ್ಲೆಯ ಪೊಲೀಸರು
ಅಕ್ರಮ ಮರಳು ಸಾಗಾಣಿಕೆಗೆ ನಕಲಿ ರಾಯಸಧನ ಪರ್ಮಿಟ್‌ ಮಾಡಿಕೊಟ್ಟು ಬಂಧನಕ್ಕೊಳಗಾದ ಆರೋಪಿಗಳು ಮತ್ತು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ರಾಯಚೂರು ಜಿಲ್ಲೆಯ ಪೊಲೀಸರು   

ರಾಯಚೂರು: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲು ನಕಲಿ ರಾಯಸಧನ ಅನುಮತಿ ಪತ್ರ ತಯಾರಿಸಿ ಕೊಡುತ್ತಿದ್ದ ಜಾಲವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ದೇವದುರ್ಗ ತಾಲ್ಲೂಕು ಪೊಲೀಸರು ಭೇದಿಸಿದ್ದು, ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಶಹಾಪುರ ತಾಲ್ಲೂಕು ವಿಭೂತಿಹಳ್ಳಿಯ ಲಾರಿ ಚಾಲಕ ನಿಂಗಯ್ಯ ಹನುಮಂತ ಗುಂಡಿನ ಮನೆ, ದೇವದುರ್ಗದ ಖಾಜಾ ಹುಸೇನ್‌, ಮಾನ್ವಿಯ ಐ.ಬಿ. ರೋಡ್‌ ನಿವಾಸಿ ನಕಲಿ ರಾಯಸಧನದ ಕಿಂಗ್‌ಪಿನ್ ರಾಮಕೃಷ್ಣ ಸತ್ಯನಾರಾಯಣ, ಇಲಕಲ್‌ನ ಅಂದಾನಯ್ಯ ಯೋಗಯ್ಯ ಪಾಟೀಲ, ರಾಯಚೂರಿನ ಭೇರೂನ್‌ ಕಿಲ್ಲಾ ನಿವಾಸಿ ಶರಣೇಗೌಡ ವಿರೂಪಾಕ್ಷಿಗೌಡ, ದೇವದುರ್ಗ ತಾಲ್ಲೂಕು ನಗರಗುಂಡದ ಹನುಮಂತ್ರ ಚಂದ್ರಾಮ, ದೇವದುರ್ಗ ಆಶ್ರಯ ಕಾಲಾನಿ ನಿವಾಸಿ ಮೌನೇಶ ರಾಮಚಂದ್ರ ಬಂಧಿತ ಆರೋಪಿಗಳು.

ಬಂಧಿತರಿಂದ ಲ್ಯಾಪ್‌ಟಾಪ್‌, ಪ್ರಿಂಟರ್‌, ನಕಲಿ ಪತ್ರಗಳು, ಪೇಪರಗಳು ಹಾಗೂ ಕಲರ್‌ ಜಪ್ತಿ ಮಾಡಿಕೊಳ್ಳಲಾಗಿದೆ. ದೇವದುರ್ಗ ತಾಲ್ಲೂಕು ಜೋಳದಡಗಿ ಬಳಿ ಮರಳು ತುಂಬಿದ ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ ರಾಯಸಧನ ಪತ್ರವು ನಕಲಿ ಎನ್ನುವುದು ಗೊತ್ತಾಗಿದೆ. ಅಕ್ರಮ ಮರಳನ್ನು ದೇವದುರ್ಗದಿಂದ ಬೀದರ್‌ಗೆ ಲಾರಿಗಳ ಮೂಲಕ ಸಾಗಿಸಲಾಗುತ್ತಿತ್ತು.

ADVERTISEMENT

ರಾಯಚೂರಿನ ಶರಣೇಗೌಡ, ಇಲಕಲ್‌ನ ದಾನಯ್ಯ ಅವರು ಮಧ್ಯಸ್ಥಿಕೆ ವಹಿಸಿ ಮಾನ್ವಿ ನಿವಾಸಿ ರಾಮಕೃಷ್ಣನ ಮನೆಯಲ್ಲಿ ಲ್ಯಾಪ್‌ಟಾಪ್‌ ಮತ್ತು ಪ್ರಿಂಟರ್‌ ಸಹಾಯದಿಂದ ನಕಲಿ ಮರಳಿನ ರಾಯಲ್ಟಿ ಅನುಮತಿ ಪತ್ರ ತಯಾರಿಸುತ್ತಿದ್ದರು. ದೇವದುರ್ಗದ ಹನುಮಂತ ಮತ್ತು ಮೌನೇಶ ವಿಶ್ವಕರ್ಮ ಅವರ ಮುಖಾಂತರವಾಗಿ ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುವವರಿಗೆ ನೀಡಲಾಗುತ್ತಿತ್ತು. ಎಲ್ಲರೂ ಸೇರಿ ಒಕ್ಕೂಟ ಮಾಡಿಕೊಂಡು ಸರ್ಕಾರದ ಕೊಕ್ಕಸಕ್ಕೆ ಭಾರಿ ನಷ್ಟ ಮಾಡಿರುವುದು ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರಬಾಬು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ. ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.