ADVERTISEMENT

ಸರ್ಕಾರಿ ಸೌಲಭ್ಯ ಪಡೆಯಲು ಹಿಂಜರಿಕೆ ಬೇಡ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 15:02 IST
Last Updated 16 ಆಗಸ್ಟ್ 2022, 15:02 IST
ರಾಯಚೂರಿನ ಶೃಂಗೇರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ರಾಯಚೂರಿನ ಶೃಂಗೇರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.   

ರಾಯಚೂರು: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಹಿಂಜರಿಕೆ ಇಟ್ಟುಕೊಳ್ಳಬಾರದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಸಲಹೆ ನೀಡಿದರು.

ನಗರದ ಗಾಜಗಾರಪೇಟೆಯ ಶೃಂಗೇರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಸೋಮವಾರ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಗ ಪುರಸ್ಕಾರ ಮತ್ತು ಸಾಧಕರಿಗೆ ವಿಪ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ವಾಕ್ಯದಡಿ ರಾಜ್ಯ ಸರ್ಕಾರವು ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸಮಾಜದ ಬಾಂಧವರು ಇವುಗಳಿಂದ ಅನುಕೂಲ ಪಡೆದುಕೊಳ್ಳಬೇಕು ಎಂದರು.

ADVERTISEMENT

ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎನ್‌.ಕುಮಾರ್‌ ಮಾತನಾಡಿ, ಬ್ರಾಹ್ಮಣ ಸಮಾಜ ಅಭಿವೃದ್ಧಿ ಆಗುವುದಕ್ಕೆ ಅತಿಬುದ್ಧಿವಂತಿಕೆ ಬಳಸುವುದು ಬೇಕಾಗಿಲ್ಲ. ಹೃದಯವಂತಿಕೆಯನ್ನು ಇಟ್ಟುಕೊಂಡು ಮುಂದೆ ಬರಬೇಕು ಎಂದರು.

ಬೇರೆಯವರ ಸಂಪ್ರದಾಯ, ಆಚಾರಗಳ ಬಗ್ಗೆ ಮಾತನಾಡುವ ಹಕ್ಕು ನಮಗಿಲ್ಲ. ಆದರೆ ಬೇರೆ ಧರ್ಮಗಳನ್ನು ನೋಡಿ ನಾವು ಸಾಕಷ್ಟು ಕಲಿಯಬೇಕಿದೆ. ನಮ್ಮ ಸಂಸ್ಕೃತಿ ಪಾಲನೆ ಮಾಡಬೇಕಿದೆ. ನಮ್ಮಲ್ಲಿ ಸಂಸ್ಕೃತಿ ಇನ್ನೂ ಉಳಿದುಕೊಂಡಿರುವುದಕ್ಕೆ ಸಮಾಜದ ಮಹಿಳೆಯರು ಪ್ರಮುಖ ಕಾರಣ ಎಂದು ಹೇಳಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಪ್ರತಿಭಾ ಪುರಸ್ಕಾರ ಏರ್ಪಡಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಕಾರ್ಯ. ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ರಾಜ್ಯ ಸರ್ಕಾರವು ಅಭಿವೃದ್ಧಿ ಮಂಡಳಿ ಮೂಲಕ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಮಂಡಳಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಸ್ಯ ಕಲಾವಿದ ನರಸಿಂಹ ಜೋಷಿ, ಕೊಪ್ಪಳದ ಡಾ.ಕೆ.ಜಿ.ಕುಲಕರ್ಣಿ, ಶಾಮರಾವ್‌ ಕುಲಕರ್ಣಿ ಹೇಮನೂರು, ಎಂ.ಗೋವಿಂದ ಭಟ್‌, ಕೆರೂರ ವಾದಿರಾಜ್‌ ಆಚಾರ್‌, ನರಸಿಂಹಾಚಾರ್ಯ, ರಾಮಕೃಷ್ಣ ಆಚಾರ್‌ ಗೋನವಾರ್‌, ಹಳ್ಳೇರಾವ್‌ ಕುಲಕರ್ಣಿ, ಸಿಂಧನೂರಿನ ವೆಂಕಣ್ಣ ಆಚಾರ್ಯ ಜೋಷಿ, ಹನಮಂತರಾವ್‌ ಕಲ್ಲೂರಕರ್‌ ಅವರು ವಿಪ್ರಶ್ರೀ ಪಶಸ್ತಿಗೆ ಭಾಜನರಾದರು. ಗಣ್ಯರು ಪ್ರಶಸ್ತಿ, ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದಿರುವ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಮಂಡಳಿಯ ರಾಜ್ಯ ನಿರ್ದೇಶಕ ವತ್ಸಲಾ ನಾಗೇಶ, ಗುರುರಾಜ ಆಚಾರ್ಯ ತಾಳಿಕೋಟಿ, ತ್ರಿವಿಕ್ರಮ ಜೋಷಿ, ಜಿ.ಪ್ರಕಾಶ್‌ ಆಲಂಪಲ್ಲಿ, ಶ್ರೀನಿವಾಸರಾಜ ದೇಸಾಯಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.