ಸಿಂಧನೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೀರಾವರಿ ಯೋಜನೆಗಳನ್ನು ಕಡೆಗಣಿಸಿ ಕೇವಲ ಬೆಂಗಳೂರು ಅಭಿವೃದ್ಧಿಗೆ ಸೀಮಿತವಾಗಿದ್ದಾರೆ. ಕಾರಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವಾಸುದೇವ್ ಮೇಟಿ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನವಲಿ ಜಲಾಶಯದ ಡಿಪಿಆರ್‌ಗೆ ₹1 ಸಾವಿರ ಕೋಟಿ ಬಿಡುಗಡೆಯಾಗಿದ್ದು, ಕಾರ್ಯಾನುಷ್ಠಾನ ಮಾಡುವ ಬಗ್ಗೆ ಇನ್ನೂ ಮುತುವರ್ಜಿ ವಹಿಸುತ್ತಿಲ್ಲ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಿ ಜಲಾಶಯ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.
‘ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಮತ್ತು ನವಲಿ ಜಲಾಶಯ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಹೋರಾಟ ಮಾಡಿದ ಹಿನ್ನೆಲೆಯಲ್ಲಿ 7 ದಿನ ಕಾರಾಗೃಹವಾಸ ಅನುಭವಿಸಿದ್ದೇನೆ. ಹೋರಾಟದ ಉದ್ಧೇಶ ಸಾರ್ಥಕವಾಗಬೇಕಾದರೆ ಸರ್ಕಾರ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಬೇಕು’ ಎಂದರು.
‘ಕೃಷಿ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ₹5,500 ಕೋಟಿ ಬಿಡುಗಡೆ ಮಾಡಿದೆ. ಇದರಿಂದ ರೈತರಿಗೆ ಬೇಕಾಗುವ ಸಲಕರಣೆ ಸೇರಿ ವಿವಿಧ ಚಟುವಟಿಕೆಗಳಿಗೆ ಹಣದ ಕೊರತೆಯಾಗುತ್ತದೆ. ಆದ್ದರಿಂದ ₹11,000 ಕೋಟಿ ಬಿಡುಗಡೆ ಮಾಡುವ ಮೂಲಕ ಕೃಷಿ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಮುಖಂಡರಾದ ಬಸಪ್ಪ, ಸಂಗನಗೌಡ, ಮುದಿಯಪ್ಪ ನಾಯಕ, ರಾಮಣ್ಣ.ಡಿ.ನಾಯಕ, ಕಾಮಾಕ್ಷಿ ನಾಗರಾಜ, ಯಮನಪ್ಪ, ಸಿಂಧನೂರು ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಸಾಸಲಮರಿ ಹಾಗೂ ಉಪಾಧ್ಯಕ್ಷ ಯಮನಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.