ADVERTISEMENT

ಮಾನ್ವಿ: ಸಮರ್ಪಕ ನೀರಿಗಾಗಿ ರೈತರ ಧರಣಿ

ಟಿಎಲ್‍ಬಿಸಿ ವಿತರಣಾ ಕಾಲುವೆ ನಂ.76/6 ವ್ಯಾಪ್ತಿಯ ಕೊನೆಭಾಗಕ್ಕೆ ತಲುಪದ ನೀರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 13:59 IST
Last Updated 21 ಆಗಸ್ಟ್ 2021, 13:59 IST
ಹಿರೇಕೊಟ್ನೇಕಲ್ ಸಮೀಪದ ಜಲಸಂಪನ್ಮೂಲ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ನಡೆದ ರೈತರ ಧರಣಿ ಉದ್ದೇಶಿಸಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಮಾತನಾಡಿದರು
ಹಿರೇಕೊಟ್ನೇಕಲ್ ಸಮೀಪದ ಜಲಸಂಪನ್ಮೂಲ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ನಡೆದ ರೈತರ ಧರಣಿ ಉದ್ದೇಶಿಸಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಮಾತನಾಡಿದರು   

ಮಾನ್ವಿ: ತಾಲ್ಲೂಕಿನ ತುಂಗಭದ್ರಾ ಎಡದಂಡೆ ನಾಲೆಯ ಕೊನೆಭಾಗದ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ಶನಿವಾರ ಹಿರೇಕೊಟ್ನೇಕಲ್ ಸಮೀಪದ ಜಲಸಂಪನ್ಮೂಲ ಇಲಾಖೆಯ ಉಪವಿಭಾಗದ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ವಿತರಣಾ ಕಾಲುವೆ ನಂ.76/6 ವ್ಯಾಪ್ತಿಯ ಹಿರೇಕೊಟ್ನೇಕಲ್, ಚಿಕ್ಕಕೊಟ್ನೇಕಲ್, ಉಮಳಿಹೊಸೂರು, ಚೀಕಲಪರ್ವಿ ಮತ್ತಿತರ ಗ್ರಾಮಗಳ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಯದ ಕಾರಣ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಸಸಿಗಳು ಒಣಗುತ್ತಿವೆ.

ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುವುದು ಬಾಕಿ ಇದೆ. ಆದರೆ, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ವಾರಾಬಂಧಿ (ವಂತು) ಪ್ರಕಾರಣ ಕಾಲುವೆಯ ಕೊನೆಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಧರಣಿ ನಿರತರು ದೂರಿದರು.

ADVERTISEMENT

ಕಾಲುವೆಯ ಕೊನೆಭಾಗದ ವ್ಯಾಪ್ತಿಯಲ್ಲಿ 20 ಸಾವಿರ ಎಕರೆಗೆ ಜಮೀನುಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಕಾಲುವೆ ನೀರು ನಿರ್ವಹಣೆಗೆ ಅಧಿಕಾರಿಗಳನ್ನು ನೇಮಿಸಿ ಕೊನೆಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಬೇಕು.ಆರ್.ಜಿ.ರೋಡ್ ಹತ್ತಿರ ಕಾಲುವೆಯಲ್ಲಿ 3ಅಡಿ ಗೇಜ್ ನಿರ್ವಹಿಸಬೇಕು ಎಂದು ರೈತರು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅಬ್ದುಲ್ ವಾಹಿದ್ ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಧರಣಿ ನಿರತ ರೈತರ ಜತೆಗೆ ಚರ್ಚಿಸಿದರು.

‘ವಿತರಣಾ ಕಾಲುವೆ ನಂ.76/6 ವ್ಯಾಪ್ತಿಯ ಕೊನೆಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಲು ಆರ್.ಜಿ.ರೋಡ್ ಹತ್ತಿರ ಕಾಲುವೆಯಲ್ಲಿ 2.8ಗೇಜ್ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಭರವಸೆ ನೀಡಿದರು.‌

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷೆ ರೂಪಾ ಶ್ರೀನಿವಾಸನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಮುಖಂಡರಾದ ಉದ್ದಾನಪ್ಪಗೌಡ ಹಿರೇಕೊಟ್ನೇಕಲ್, ಶಿವಪ್ಪಗೌಡ ಮಾಲಿಪಾಟೀಲ್, ಶಂಭನಗೌಡ ಪೊಲೀಸ್ ಪಾಟೀಲ್, ರಡ್ಡೆಪ್ಪಗೌಡ ಭೋಗಾವತಿ, ಶ್ಯಾಮಸಿಂಗ್, ಶರಣಪ್ಪ ಮರಳಿ,ಹನುಮಂತಗೌಡ, ಬಸವರಾಜ ಸಜ್ಜನ್, ಶೇಖರಪ್ಪ ಅಮರೇಶ್ವರ ಕ್ಯಾಂಪ್, ಶ್ರೀನಿವಾಸ ನಾಯಕ, ಹುಚ್ಚಪ್ಪನಾಯಕ, ಅಂಬಯ್ಯ ನಾಯಕ, ಬಜ್ಜಯ್ಯ ನಾಯಕ, ಖಾನ್ ಸಾಬ್, ಈರೇಶ ನಾಯಕ, ಮಹಾದೇವಪ್ಪಗೌಡ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.