
ಸಿಂಧನೂರು: ತಾಲ್ಲೂಕಿನ ರೌಡಕುಂದಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಮುಂದೆ ನೂರಾರು ರೈತರು ಮುಂಗಾರು ಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಪ್ರತಿಭಟಿಸಿದರು.
ಬಿಜೆಪಿ ಮುಖಂಡ ಕೆ.ಕರಿಯಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಿ, ರೈತರಿಂದ ಮಾಹಿತಿ ಪಡೆದು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಕರೆ ಮಾಡಿ, ‘ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮಿನಿವಿಧಾನಸೌಧ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು. ರೌಡಕುಂದಾ ಧರಣಿ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಅನಾಮಧೇಯ ದೂರಿನಿಂದಾಗಿ ಖರೀದಿ ಕೇಂದ್ರ ಬಂದ್ ಮಾಡಲಾಗಿದೆ ಎಂಬ ಮಾಹಿತಿಯಿದೆ. ಅದು ಅಧಿಕೃತ ಅಲ್ಲ. ಅನಾಮಿಕರು ಅರ್ಜಿ ಬರೆದಿದ್ದಾರೆ ಎಂದು ಗೊತ್ತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ತಾಲ್ಲೂಕಿನಲ್ಲಿ 19 ಜೋಳ ಖರೀದಿ ಕೇಂದ್ರಗಳನ್ನು ಸರ್ಕಾರ ಆರಂಭ ಮಾಡಿದ್ದು, 4 ದಿನಗಳಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಬಿಜೆಪಿ ಮುಖಂಡ ಪರಮೇಶ್ವಪ್ಪ ಆದಿಮನಿ, ರೌಡಕುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಂತೇಶ ಹಿರೇಗೌಡರ, ನಿರ್ದೇಶಕ ಕನಕಪ್ಪ ನಾಯಕ, ರಂಗನಗೌಡ, ಸೂರ್ಯನಾರಾಯಣಮೂರ್ತಿ, ನಾಗಪ್ಪ ಉಪ್ಪಾರ, ಬೊಳೆಡಪ್ಪ ಸಜ್ಜನ, ಮಹಿಬೂಬ್‍ಸಾಬ್ ಗೋಮರ್ಸಿ, ಮುಖಂಡರಾದ ಚಂದ್ರಶೇಖರ, ಶಾಮೀದ್‍ಸಾಬ್, ವಿರೂಪಾಕ್ಷಪ್ಪ, ಶರಣಪ್ಪ ದೇವರಮನಿ, ಶಿವಪ್ಪ ಹರೇಟನೂರು, ಲಿಂಗಪ್ಪ ಸಜ್ಜನ, ಯಂಕೋಬ, ಸಣ್ಣೆಪ್ಪ ಜವಳಗೇರಾ ಭಾಗವಹಿಸಿದ್ದರು.
ಸಿಪಿಐ ವಿನಾಯಕ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಎಸ್‌ಐ ಶ ರಾಠೋಡ್ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.