ಸಿಂಧನೂರು: 2024-25ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ಬೆಂಗಳೂರಿನಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಂಗಾರು ಋತುವಿನಲ್ಲಿ ಬೆಳೆದ ಸುಮಾರು 13.60 ಲಕ್ಷ ಕ್ವಿಂಟಲ್ ಜೋಳ ಖರೀದಿಗೆ ನೋಂದಣಿ ಆಗಿದೆ. ಆದರೆ ಇದರಲ್ಲಿ 10 ಲಕ್ಷ ಕ್ವಿಂಟಲ್ ಜೋಳವನ್ನು ಈಗಾಗಲೇ ಖರೀದಿಸಲಾಗಿದೆ. ಪ್ರತಿ ರೈತರಿಂದ 1 ಎಕರೆಗೆ 20 ಕ್ವಿಂಟಲ್, ಗರಿಷ್ಠ 150 ಕ್ವಿಂಟಲ್‍ವರೆಗೆ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
ಮುಂಗಾರು ಋತುವಿನಲ್ಲಿ ನೋಂದಣಿಯಾಗಿ ಉಳಿದ 3.60 ಲಕ್ಷ ಕ್ವಿಂಟಲ್ ಜೋಳವನ್ನು ತಕ್ಷಣವೇ ಸರ್ಕಾರ ಖರೀದಿ ಮಾಡಬೇಕು ಎಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‍ಪಾಷಾ ದಿದ್ದಿಗಿ ಆಗ್ರಹಿಸಿದರು.
ಮೇ 22ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರ ಆದೇಶದ ಪ್ರಕಾರ ಪ್ರತಿ ಎಕರೆಗೆ 10 ಕ್ವಿಂಟಲ್, ಗರಿಷ್ಠ 150 ಕ್ವಿಂಟಲ್ ಇದ್ದು, ಇದರಿಂದ ಸಣ್ಣ ರೈತರಿಗೆ ತೊಂದರೆಯಾಗುತ್ತಿದೆ. ಈ ಮೊದಲಿನ ಆದೇಶದಂತೆ ಪ್ರತಿ ಎಕರೆಗೆ 20 ಕ್ವಿಂಟಲ್ ಖರೀದಿ ಮಾಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಜೋಳ ಕಟಾವು ಮಾಡಿ 5 ತಿಂಗಳು ಗತಿಸಿದೆ. ಖರೀದಿ ಸಂದರ್ಭದಲ್ಲಿ ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ಕೇಂದ್ರ ಸರ್ಕಾರದ ಉಗ್ರಾಣದ ಗ್ರೇಡರ್‌ಗಳು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ರಾಜ್ಯ ಉಗ್ರಾಣಗಳಲ್ಲಿ ದಾಸ್ತಾನಿಗೆ ಅವಕಾಶ ನೀಡಿ ಆದೇಶ ಹೊರಡಿಸಬೇಕು ಮತ್ತು ಹಿಂಗಾರು ಋತುವಿನಲ್ಲಿ ನೋಂದಣಿ ಆಗಿರುವಂತಹ ಎಲ್ಲ ರೈತರ ಸಂಪೂರ್ಣ ಜೋಳವನ್ನು ಖರೀದಿ ಮಾಡಬೇಕು. ಇಲ್ಲದಿದ್ದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಪೋತ್ನಾಳ, ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ ಬನ್ನಿಗನೂರು, ತಾಲ್ಲೂಕು ಘಟಕದ ಅಧ್ಯಕ್ಷ ಚನ್ನನಗೌಡ ಬನ್ನಿಗನೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.