ADVERTISEMENT

ಹರಿದ ₹ 20ರ ನೋಟಿಗಾಗಿ ಜಗಳ: ಮಹಿಳೆ ಸಾವು, ಪೊಲೀಸ್ ಭದ್ರತೆಯಲ್ಲಿ ಅಂತ್ಯಕ್ರಿಯೆ

ಪೊಲೀಸ್ ಭದ್ರತೆಯಲ್ಲಿ ಮಹಿಳೆ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 6:09 IST
Last Updated 25 ಅಕ್ಟೋಬರ್ 2022, 6:09 IST
ರುಕ್ಕಮ್ಮ
ರುಕ್ಕಮ್ಮ   

ಸಿಂಧನೂರು: ತಾಲ್ಲೂಕಿನ ಗೀತಾ ಕ್ಯಾಂಪ್‌ನಲ್ಲಿ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರಿಬ್ಬರು ಪರಸ್ಪರ ಜಗಳವಾಡುತ್ತಿದ್ದ ವೇಳೆ ಬೆಂಕಿ ತಗುಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರುಕ್ಕಮ್ಮ ಮೌನೇಶ ಲಂಬಾಣಿ (40) ಮೃತರು. ಮಲ್ಲಮ್ಮ ಗಾಯಗೊಂಡವರು. ಅವರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ಅಕ್ಟೋಬರ್‌ 22ರಂದು ಕ್ಯಾಂಪ್‌ನಲ್ಲಿರುವ ಮಲ್ಲಮ್ಮ ಅವರ ಅಂಗಡಿಯಿಂದ ರುಕ್ಕಮ್ಮಳ ಪುತ್ರಿ ಅನಿತಾ ಅವರು ದಿನಸಿ ಖರೀದಿಸಿ, ಚಿಲ್ಲರೆ ಹಣ ಪಡೆದು ಮನೆಗೆ ಮರಳಿದ್ದರು. ಪುತ್ರಿ ತಂದ ₹20 ಮುಖಬೆಲೆಯ ಹರಿದ ನೋಟನ್ನು ಪುನಃ ಅಂಗಡಿಗೆ ಒಯ್ದ ರುಕ್ಕಮ್ಮ, ಬೇರೆ ನೋಟು ಕೊಡುವಂತೆ ಮಲ್ಲಮ್ಮಗೆ ಕೇಳಿದ್ದಾರೆ. ‘ನಿಮ್ಮ ಪುತ್ರಿ ನಮ್ಮ ಅಂಗಡಿಗೆ ಬಂದಿಲ್ಲ. ಬೇರೆ ನೋಟು ಕೊಡಲ್ಲ’ ಎಂದಾಗ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ.

ಈ ವೇಳೆ ಮಲ್ಲಮ್ಮ, ರುಕ್ಕಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಕುಪಿತ ರುಕ್ಕಮ್ಮ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಪೆಟ್ರೋಲ್ ಬಾಟ್ಲಿಯಿಂದ ಮಲ್ಲಮ್ಮಗೆ ಹೊಡೆದಾಗ ಪಕ್ಕದಲ್ಲಿದ್ದ ದೇವರ ದೀಪದಿಂದ ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿದೆ. ಮಲ್ಲಮ್ಮಗೆ ಬಳ್ಳಾರಿಯ ವಿಮ್ಸ್‌ಗೆ, ರುಕ್ಕಮ್ಮಗೆ ರಾಯಚೂರಿನ ರಿಮ್ಸ್‌ಗೆ ಶನಿವಾರ ರಾತ್ರಿ ದಾಖಲಿಸಲಾಯಿತು. ಆದರೆ, ರುಕ್ಕಮ್ಮ ಬದುಕುಳಿಯಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪೊಲೀಸ್ ಇನ್‌ಸ್ಪೆಕ್ಟರ್ ರವಿಕುಮಾರ ಕಪ್ಪತ್‍ನವರ, ಪಿಎಸ್‌ಐ ಯರಿಯಪ್ಪ, ಚಂದ್ರಪ್ಪ ನೇತೃತ್ವದಲ್ಲಿ ಎರಡು ಡಿಎಆರ್ ತುಕಡಿ ಹಾಗೂ ಹೆಚ್ಚಿನ ಸಂಖ್ಯೆಯ ಪೊಲೀಸ್‌ ಭದ್ರತೆಯಲ್ಲಿ ರುಕ್ಕಮ್ಮ ಅಂತ್ಯಕ್ರಿಯೆ ನಡೆಯಿತು.

ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.