ADVERTISEMENT

ಪ್ರಥಮ ಚಿಕಿತ್ಸೆ ತರಬೇತಿ ಎಲ್ಲರಿಗೂ ಅಗತ್ಯ: ಸ್ಮಿತಾ ಅಕ್ಕ

ಜೀವ ರಕ್ಷಕ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 12:26 IST
Last Updated 7 ಅಕ್ಟೋಬರ್ 2022, 12:26 IST
ರಾಯಚೂರಿನಲ್ಲಿ ಕೆಕೆಆರ್‌ಟಿಸಿ ಸಿಬ್ಬಂದಿಗೆ, ಹೋಮ್‌ಗಾರ್ಡ್ಗಳಿಗೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಜೀವ ರಕ್ಷಕ ಪ್ರಥಮ ಚಿಕಿತ್ಸೆ ತರಬೇತಿಯನ್ನು ಶುಕ್ರವಾರ ನೀಡಲಾಯಿತು.
ರಾಯಚೂರಿನಲ್ಲಿ ಕೆಕೆಆರ್‌ಟಿಸಿ ಸಿಬ್ಬಂದಿಗೆ, ಹೋಮ್‌ಗಾರ್ಡ್ಗಳಿಗೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಜೀವ ರಕ್ಷಕ ಪ್ರಥಮ ಚಿಕಿತ್ಸೆ ತರಬೇತಿಯನ್ನು ಶುಕ್ರವಾರ ನೀಡಲಾಯಿತು.   

ರಾಯಚೂರು: ಪ್ರಥಮ ಚಿಕಿತ್ಸೆ ನೀಡಿ ಜನರ ಪ್ರಾಣ ರಕ್ಷಿಸುವುದು ತುಂಬಾ ಪುಣ್ಯದ ಕಾರ್ಯ. ಇಂತಹ ತರಬೇತಿ ಎಲ್ಲಾ ಸಿಬ್ಬಂದಿಗೂ ನೀಡುವುದು ಅವಶ್ಯಕವಾಗಿದೆ ಎಂದು ಈಶ್ವರಿ ವಿಶ್ವವಿದ್ಯಾಲಯ ರಾಯಚೂರು ಕೇಂದ್ರದ ಸ್ಮಿತಾ ಅಕ್ಕ ಹೇಳಿದರು.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ತರಬೇತಿ ಕೇಂದ್ರದಿಂದ ಕೆಕೆಆರ್‌ಟಿಸಿ ಸಿಬ್ಬಂದಿಗೆ, ಹೋಮ್‌ಗಾರ್ಡ್ಗಳಿಗೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಜೀವ ರಕ್ಷಕ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಕ ಮೊಹಮ್ಮದ ಫೈಯಾಜ್ ಮಾತನಾಡಿ, ಪ್ರಥಮ ಚಿಕಿತ್ಸೆ ಕಲಿತರೆ ಅವಘಡಕ್ಕೀಡಾದವರ ಜೀವ ರಕ್ಷಣೆ ಮಾಡಬಹುದು ಎಂದು ಹೇಳಿದರು.

ADVERTISEMENT

ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು- ನಿರ್ವಾಹಕರು ಹಾಗೂ ಮೆಕ್ಯಾನಿಕ್ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ತರಬೇತಿ ನೀಡಿವುದು ತುಂಬಾ ಉಪಯುಕ್ತ ಎಂದು ಹೇಳಿದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ವೆಂಕಟೇಶ ವೈ.ನಾಯಕ ಮಾತನಾಡಿ, ಪ್ರತಿ ವರ್ಷದ ಸಾವು-ನೋವಿನ ಅಂಕಿ-ಅಂಶ ಹಾಗೂ ಪ್ರಥಮ ಚಿಕಿತ್ಸೆ ತರಬೇತಿಯ ಮಹತ್ವವನ್ನು ತಿಳಿಸಿಕೊಟ್ಟರು.

ಈ ತರಬೇತಿಯಲ್ಲಿ ಕೆಕೆಆರ್‌ಟಿಸಿ ಚಾಲಕರು, ನಿರ್ವಾಹಕರು, ಕಾನ್ಸ್‌ಟೇಬಲ್‌ಗಳು ಹಾಗೂ ತಾಂತ್ರಿಕ ಸಹಾಯಕರು, ಜಿಲ್ಲಾ ಗೃಹ ರಕ್ಷಕದಳದಿಂದ ಹೋಂಗಾರ್ಡ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟು 50 ಜನರು ಭಾಗವಹಿಸಿದ್ದರು.

ರಾಜ್ಯಮಟ್ಟದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಪಡೆದ ಡಾ.ರಾಕೇಶಕುಮಾರ ಜಿ. ನಾಯ್ಕ, ಮರುಳ ಸಿದ್ದೇಶ್ವರ ದೇವೂರು, ವಿಜಯಕುಮಾರ ಎ.ಡಿ., ಕಿರಣ ಹೆಗಡೆ, ಆಸೀಯಾ ಅಂಜುಮ್ ಹಾಗೂ ಸುಚರಿತಾ ಎಸ್ ಹಕ್ಕಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಎದೆನೋವು, ಹೃದಯಾಘಾತ, ಪ್ರಜ್ಞಾಹೀನತೆ, ಪಾರ್ಶ್ವವಾಯು, ವಿಶಸೇವನೆ, ನೀರಿನಲ್ಲಿ ಮುಳುಗುವುದು, ಗಾಯ ನಿರ್ವಹಣೆ, ರಕ್ತಸ್ರಾವ ತಡೆಗಟ್ಟುವುದು, ವಿದ್ಯುತ್ ಸ್ಪರ್ಶ, ನಾಯಿ-ಹಾವು ಕಡಿತದಂತಹ ಅನಿರೀಕ್ಷಿತ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು. ಆನಂತರ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.