ADVERTISEMENT

ಹಳ್ಳಿಗಳಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಗಮನಹರಿಸಿ: ತಾಲ್ಲೂಕು ಪಂಚಾಯಿತಿ ಇಒ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 7:34 IST
Last Updated 10 ಜುಲೈ 2025, 7:34 IST
ಸಿರವಾರದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಇಒ ನೇತೃತ್ವದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಸ್ವಚ್ಛತೆ ನಿರ್ವಹಣೆ ಕುರಿತು ಪಿಡಿಒಗಳೊಂದಿಗೆ ಸಭೆ ನಡೆಯಿತು
ಸಿರವಾರದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಇಒ ನೇತೃತ್ವದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಸ್ವಚ್ಛತೆ ನಿರ್ವಹಣೆ ಕುರಿತು ಪಿಡಿಒಗಳೊಂದಿಗೆ ಸಭೆ ನಡೆಯಿತು   

ಸಿರವಾರ: ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಸ್ವಚ್ಛತೆ ಕಾಪಾಡಲು ಪಿಡಿಒಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಶಶಿಧರ ಸ್ವಾಮಿ ಮಠದ್ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಸ್ವಚ್ಛತೆ ನಿರ್ವಹಣೆಯ ಕುರಿತು ಬುಧವಾರ ನಡೆದ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕಡ್ಡಾಯವಾಗಿ ನೀರು ಶುದ್ಧೀಕರಿಸುವ ಘಟಕಗಳನ್ನು ಸಕ್ರಿಯವಾಗಿ ನೀರು ಪೂರೈಸುವಂತೆ ನೋಡಿಕೊಳ್ಳಬೇಕು. ಸ್ಥಗಿತಗೊಂಡ ಘಟಕಗಳನ್ನು ಪಂಚಾಯಿತಿಯಲ್ಲಿ ಲಭ್ಯವಿರುವ 15ನೇ ಹಣಕಾಸಿನ ಅನುದಾನದಲ್ಲಿ ದುರಸ್ತಿ ಮಾಡಿ ಪ್ರಾರಂಭಿಸಬೇಕು ಎಂದರು.

ADVERTISEMENT

ಅನುದಾನದ ಕೊರತೆ ಉಂಟಾದರೆ ಅಥವಾ ಹೊಸದಾಗಿ ನಿರ್ಮಿಸಿದ ನೀರು ಶುದ್ಧೀಕರಣ ಘಟಕಗಳು ಹಸ್ತಾಂತರವಾಗದೆ ಇದ್ದರೆ ಆರ್‌ಡಬ್ಲ್ಯುಎಸ್ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಳ ಮಧ್ಯದಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ನೀರು ಕಲುಷಿತಗೊಂಡು ಜನರಿಗೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದರೆ ಆಯಾ ಪಿಡಿಒಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.

ಮಳೆಗಾಲ ಇರುವುದರಿಂದ ಹದಗೆಟ್ಟ ರಸ್ತೆ ಹಾಗೂ ತಗ್ಗುಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗಿ ಜನರಿಗೆ ಡೆಂಗಿ ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಇರುತ್ತದೆ. ಹಾಗಾಗಿ ತಗ್ಗುಗುಂಡಿಗಳನ್ನು ಮುರಂ ಹಾಕಿ ಮುಚ್ಚಬೇಕು ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ವಾರಕ್ಕೊಮ್ಮೆ ಫಾಗಿಂಗ್ ಮಾಡಿಸಬೇಕು ಎಂದರು.

ಪಿಡಿಒಗಳಾದ ಪ್ರದೀಪ ಪಾಟೀಲ, ಪ್ರಸಾದ, ಸೈಯದ್, ರಮೇಶ, ಮಮತಾ ಡಿ.ಎನ್., ಸಹರಾ ಬೇಗಂ, ದೇವಪ್ಪ, ವಿಜಯಕುಮಾರ, ಕಾರ್ಯದರ್ಶಿ ಈಕಪ್ಪ ಮುರ್ಕಿಗುಡ್ಡ, ಕಂಪ್ಯೂಟರ್ ಆಪರೇಟರ್ ಆಶಣ್ಣ ಯಾದವ್, ಹುಲಿಗೆಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.