ADVERTISEMENT

ಕವಿತಾಳ: ಮೂವರ ಜೀವಕ್ಕೆ ಕುತ್ತು ತಂದ ಚವಳೆಕಾಯಿ ಪಲ್ಯ

ಕಡ್ಡೋಣಿ, ತಿಮ್ಮಾಪುರದಲ್ಲಿ ಸ್ಮಶಾನ ಮೌನ, ಮುಗಿಲು ಮುಟ್ಟಿದ ತಾಯಿಯ ರೋಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:59 IST
Last Updated 23 ಜುಲೈ 2025, 4:59 IST
ಕವಿತಾಳ ಸಮೀಪದ ಕೆ.ತಿಮ್ಮಾಪುರದಲ್ಲಿ ಚವಳೆಕಾಯಿ ಪಲ್ಯ ಸೇವಿಸಿ ಮೃತಪಟ್ಟ ರಮೇಶ ನಾಯಕ ತಾಯಿ ರೋಧಿಸುತ್ತಿರುವುದು
ಕವಿತಾಳ ಸಮೀಪದ ಕೆ.ತಿಮ್ಮಾಪುರದಲ್ಲಿ ಚವಳೆಕಾಯಿ ಪಲ್ಯ ಸೇವಿಸಿ ಮೃತಪಟ್ಟ ರಮೇಶ ನಾಯಕ ತಾಯಿ ರೋಧಿಸುತ್ತಿರುವುದು   

ಕವಿತಾಳ: ‘ಚಂದಾಗಿ ಬಾಳೇವು ಮಾಡೋರಪ್ಪ ರಾಮಣ್ಣ, ನೀವು ಯಾರ ಕೈಯಲ್ಲಿ ಅಲ್ಲಂತ ಅನ್ಸಿಕೊಂಡಿಲ್ಲ, ದುಡಿದು ತಿಂತಿದ್ರಿ, ನನ್ನ ಬಿಟ್ಟು ಹೋಗ್ಬಿಟ್ರೆಲ್ಲ, ಬಂಗಾರದಂತ ಮೊಮ್ಮಕ್ಕಳನ ಕಳಕೊಂಡ ನಾ ಹೆಂಗ ಬದುಕಲಿʼ ಎಂದು ಎದೆ ಬಡಿದುಕೊಂಡು ಗೋಳಾಡುತ್ತಿದ್ದ ತಾಯಿಯ ರೋಧನಕ್ಕೆ ಗ್ರಾಮಸ್ಥರು ಕಣ್ಣೀರಾದರು.

ಇಲ್ಲಿಗೆ ಸಮೀಪದ ಕಡ್ಡೋಣಿ ತಿಮ್ಮಾಪುರದಲ್ಲಿ ಚವಳೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ ಮೂವರು ಮಂಗಳವಾರ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮೃತ ರಮೇಶನ ತಾಯಿ ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

‘ಹತ್ತು ವರ್ಷಗಳ ಹಿಂದೆ ದುಡಿಯಲು ಬೆಂಗಳೂರಿಗೆ ಹೋಗಿ ಅಲ್ಲಿಯೇ ನೆಲೆಸಿದ್ದ ರಮೇಶ ಮಕ್ಕಳನ್ನು ಶಾಲೆಗೆ ಸೇರಿಸಲು ಈ ವರ್ಷ ಊರಿಗೆ ವಾಪಸ್‌ ಬಂದಿದ್ದು, 2 ಎಕರೆ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆದಿದ್ದಾರೆ. ಹತ್ತಿ ಮೊಳಕೆಯೊಡೆಯದ ಖಾಲಿ ಜಾಗದಲ್ಲಿ ಮನೆ ಬಳಕೆಗಾಗಿ ಚವಳೆಕಾಯಿ ಬೆಳೆದಿದ್ದಾರೆ. ಕಷ್ಟ ಪಟ್ಟು ಬೆಳೆದು ಇಷ್ಟ ಪಟ್ಟು ತಿಂದ ಚವಳೆಕಾಯಿ ಪಲ್ಯ ಕುಟುಂಬದ ಮೂವರನ್ನು ಬಲಿ ಪಡೆಯಿತು’ ಎಂದು ಗ್ರಾಮಸ್ಥರು ದು:ಖ ವ್ಯಕ್ತಪಡಿಸಿದರು.

ADVERTISEMENT

ಕೀಟ ನಿಯಂತ್ರಣಕ್ಕಾಗಿ ಹತ್ತಿ ಗಿಡಕ್ಕೆ ಶನಿವಾರ ಗುಳಿಗೆ ಇಟ್ಟಿದ್ದಾರೆ. ಸೋಮವಾರ ಚವಳೆಕಾಯಿ ತಂದು ಪಲ್ಯ ಮಾಡಿದ್ದಾರೆ. ಚವಳೆಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬಾರು ಸೇವಿಸಿದ ಕುಟುಂಬದ ನಾಲ್ವರಲ್ಲಿ ಹೊಟ್ಟೆನೋವು, ವಾಕರಿಕೆ, ವಾಂತಿ, ಬೇಧಿ ಕಾಣಿಸಿಕೊಂಡಿದೆ. ಬದನೆಕಾಯಿ ಪಲ್ಯ ಸೇವಿಸಿದ ಇಬ್ಬರು ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.

ಅಸ್ವಸ್ಥ ರಮೇಶ ತನ್ನ ಸ್ನೇಹಿತ ಜೇಷ್ಠಕುಮಾರ ಅವರಿಗೆ ತಡರಾತ್ರಿ ಮೊಬೈಲ್‌ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ರಮೇಶ, ಪತ್ನಿ ಪದ್ಮಾ ಸೇರಿದಂತೆ ನಾಲ್ವರು ಮಕ್ಕಳನ್ನು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಸುಕಿನ ವೇಳೆ ರಮೇಶ ನಾಯಕ, ಪುತ್ರಿ ನಾಗರತ್ನ ಮೃತಪಟ್ಟಿದ್ದಾರೆ. ರಾಯಚೂರಿಗೆ ಸಾಗಿಸುವಾಗ ಪುತ್ರಿ ದೀಪಾ ಅಸುನೀಗಿದ್ದಾಳೆ. ಸದ್ಯ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ರಾಯಚೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕವಿತಾಳ ಸಮೀಪದ ಕೆ.ತಿಮ್ಮಾಪುರದಲ್ಲಿ ಚವಳೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.