ಪ್ರಜಾವಾಣಿ ವಾರ್ತೆ
ಮಸ್ಕಿ: ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸಾರ್ವಜನಿಕರ ಪುಟ್‌ಪಾತ್ ಹಾಗೂ ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಾದಿಡ್ಡಿಯಾಗಿ ಇಟ್ಟಿರುವ ಡಬ್ಬಿ ಅಂಗಡಿ ಹಾಗೂ ಬಂಡಿಗಳನ್ನು ಸೆ. 5ರೊಳಗೆ ತೆರವು ಮಾಡದಿದ್ದರೆ ಸೆ. 6ರಿಂದ ಪುರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಪುರಸಭೆ ಪ್ರೋಬೇಷನರಿ ಐಎಎಸ್ ಅಧಿಕಾರಿ ಪುರುರಾಜಸಿಂಗ್ ಸೋಲಂಕಿ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಲ್ಲಯ್ಯ ಅಂಬಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಬೀದಿ ವ್ಯಾಪಾರಿಗಳ ಹಾಗೂ ಪುರಸಭೆ ಸಿಬ್ಬಂದಿಯ ಸಭೆಯಲ್ಲಿ ಅವರು ಮಾತನಾಡಿದರು.
‘ಹೆದ್ದಾರಿಯಲ್ಲಿ ಡಿವೈಡರ್ ರಸ್ತೆ ಆಗಿದ್ದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಬೇಕು. ಪುಟ್‌ಪಾತ್ ಮೇಲೆ ಸಾರ್ವಜನಿಕರು ತಿರುಗಾಡುವಂತಾಗಬೇಕು. ಆದರೆ ಅಡ್ಡಾದಿಡ್ಡಿ ಬಂಡಿಗಳನ್ನು ಇಟ್ಟಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಬೀದಿ ವ್ಯಾಪಾರಿಗಳು ಸಾರ್ವಜನಿಕರಿಗೆ ತೊಂದರೆಯಾಗಂತೆ ವ್ಯಾಪಾರ ನಡೆಸಬೇಕು’ ಎಂದು ಮನವಿ ಮಾಡಿದರು.
ರಸ್ತೆಯ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ಹಾಗೂ ಪುಟ್‌ಪಾತ್ ಮೇಲಿನ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಬೇಕು. ಒಂದು ವೇಳೆ ತೆರವುಗೊಳಿಸದಿದ್ದರೆ ಪುರಸಭೆಯಿಂದಲೇ ತೆರವುಗೊಳಿಸಲಾಗುವುದು, ವ್ಯಾಪಾರಿಗಳು ಪುರಸಭೆಗೆ ಸಹಕರಿಸಬೇಕು’ ಎಂದು ಹೇಳಿದರು.
ಪಟ್ಟಣದಲ್ಲಿ ಮಾದಕ ವಸ್ತುಗಳ ಬಳಕೆ ಆಗದಂತೆ ಪುರಸಭೆ ಸಿಬ್ಬಂದಿ ಕ್ರಮಕೈಗೊಳ್ಳಬೇಕು. ಸ್ವಚ್ಛತೆ ಕಡೆ ಗಮನ ಕೊಡಬೇಕು. ಪ್ಲಾಸ್ಟಿಕ್ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಸಂಚಾರಿ ನಿಯಮಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನ ಪಾಟೀಲ, ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಪಿಎಸ್ಐ ಕೆ. ರಂಗಯ್ಯ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ವ್ಯಾಪಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.