ರಾಯಚೂರು: ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಕುರಿತು ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅಂಶಗಳನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಸಾರ್ವಜನಿಕರು ಸಾಧ್ಯವಾದಷ್ಟು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ಅಥವಾ ಲೋಹ ಮಿಶ್ರಿತ ಬಣ್ಣ ಲೇಪಿಸಿದ ಮೂರ್ತಿಗಳ ಬದಲಿಗೆ ನೈಸರ್ಗಿಕ ಬಣ್ಣಗಳಿಂದ ತಯಾರಿಸಿರುವ ಮಣ್ಣಿನ ಚಿಕ್ಕ ಮೂರ್ತಿಗಳನ್ನು ಖರೀದಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಸ್ಥಾಪನೆಗೆ ಸಂಬಂಧಪಟ್ಟಂತೆ ಗಣೇಶ ಮಂಡಳಿಯವರು ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ಅಗತ್ಯ ಪರವಾನಿಗೆ ಪಡೆಯುವ ಮೂಲಕ ಷರತ್ತು ಮತ್ತು ನಿಬಂಧನೆಗಳನ್ನು ಪಾಲನೆ ಮಾಡಬೇಕು.
ಹೊರ ರಾಜ್ಯದಿಂದ ತರುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಲೋಹ ಮಿಶ್ರಿತ ಬಣ್ಣ ಲೇಪಿತ ವಿಗ್ರಹಗಳನ್ನು ತಡೆಯುವ ಮತ್ತು ವಾಪಸ್ಸು ಕಳುಹಿಸುವ ಜವಾಬ್ದಾರಿಯನ್ನು ರಾಜ್ಯ ಅಥವಾ ಜಿಲ್ಲಾಗಡಿ ಭಾಗದ ಠಾಣೆ ಅಥವಾ ಚೆಕ್ ಪೋಸ್ಟ್ ಅಧಿಕಾರಿಗಳಿಗೆ ನೀಡಲಾಗಿದೆ. ಜಿಲ್ಲೆಯ ವಾಣಿಜ್ಯ ತೆರಿಗೆ ಹಾಗೂ ಸಾರಿಗೆ ಇಲಾಖೆ ಅಥವಾ ಪೊಲೀಸ್ ಇಲಾಖೆಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.
ಪಿಒಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿಗಳಿಗೆ ಅತವಾ ಸಂಸ್ಥೆಗಳಿಗೆ ವ್ಯಾಪಾರ್ ವಹಿವಾಟು ನಡೆಸುವ ಲೈಸನ್ ನೀಡದಂತೆ ಹಾಗೂ ಪರವಾನಗಿ ಪಡೆಯದೆ ಅನಧೀಕೃತವಾಗಿ ತಯಾರಿ ಅಥವಾ ಮಾರಾಟ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ತಕ್ಷಣ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಗಣೇಶನ ವಿಗ್ರಹಗಳನ್ನು ಸ್ಥಳೀಯ ಸಂಸ್ಥೆಗಳು (ಮುನ್ಸಿಪಾಲಿಟಿಗಳು) ಗೊತ್ತುಪಡಿಸಿದ ತಾತ್ಕಾಲಿಕ ಟ್ಯಾಂಕ್ ಅಥವಾ ಕಟ್ಟೆ ಮತ್ತು ಕೊಳಗಳಲ್ಲಿ ಮಾತ್ರ ವಿಸರ್ಜಿಸಬೇಕು. ಮೂರ್ತಿಗಳ ವಿಸರ್ಜನೆಯ ಸಮಯದಲ್ಲಿ ಹೂವು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ಗೊತ್ತುಪಡಿಸಿದ ತಾತ್ಕಾಲಿಕ ಟ್ಯಾಂಕ್ ಅಥವಾ ಕಟ್ಟೆ ಮತ್ತು ಕೊಳದ ದಡದಲ್ಲಿ ಇಟ್ಟಿರುವ ಬುಟ್ಟಿಗಳಲ್ಲಿ ಹಾಕಬೇಕು.
ಸಾರ್ವಜನಿಕರು ಮನೆಗಳಲ್ಲಿ ಸ್ಥಾಪಿಸಲ್ಪಟ್ಟ ವಿಗ್ರಹಗಳ ವಿಸರ್ಜನೆಯ ಸಮಯದಲ್ಲಿ ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸುವ ಪದ್ಧತಿಯನ್ನು ರೂಢಿ ಮಾಡಿಕೊಳ್ಳಬೇಕು. ವಿಸರ್ಜನೆ ಮಾಡಲಾದ ಮೂರ್ತಿಗಳ ಮಣ್ಣನ್ನು ಮನೆಗಳ ಆವರಣದಲ್ಲಿರುವ ಗಿಡಗಳ ಬದುಗಳಿಗೆ ಹಾಕಬೇಕು. ಮೂರ್ತಿಗಳ ವಿಸರ್ಜನೆಯಾದ 24 ಗಂಟೆಗಳ ಒಳಗೆ ತಾತ್ಕಾಲಿಕ ಟ್ಯಾಂಕ್ ಅಥವಾ ಕಟ್ಟೆ ಮತ್ತು ಕೊಳಗಳ ಹತ್ತಿರ ಬಿಟ್ಟು ಹೋದ ಸಾಮಗ್ರಿಗಳನ್ನು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿ ಕಸ ವಿಲೇವಾರಿ ಜಾಗಗಳಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
ಹಬ್ಬದ ಸಮಯದಲ್ಲಿ ಶಬ್ಧ ಮತ್ತು ವಾಯು ಮಾಲಿನ್ಯ ತಡೆಗೆ ಹೆಚ್ಚ್ಚಿನ ಧ್ವನಿ ಹೊರಸೂಸುವ ಧ್ವನಿವರ್ಧಕ ಮತ್ತು ಪಟಾಕಿಗಳನ್ನು ಉಪಯೋಗಿಸಬಾರದು. ಅಲ್ಲದೆ ರಾತ್ರಿ ಸಮಯ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಧ್ವನಿವರ್ಧಕ ಅಥವಾ ಪಟಾಕಿಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.