ADVERTISEMENT

ಗಣೇಶ ಹಬ್ಬ: ಜಿಲ್ಲೆಯಾದ್ಯಂತ ಸರಳ ಆಚರಣೆ

ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಚಿಕ್ಕ ಗಾತ್ರದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 16:59 IST
Last Updated 12 ಸೆಪ್ಟೆಂಬರ್ 2021, 16:59 IST
ರಾಯಚೂರಿನ ಬಸವನಭಾವಿಯ ಬಳಿ ಪ್ರತಿಷ್ಠಾಪಿಸಲಾದ ಪರಿಸರ ಸ್ನೇಹಿ ಮಣ್ಣಿನ ಗಣಪ.
ರಾಯಚೂರಿನ ಬಸವನಭಾವಿಯ ಬಳಿ ಪ್ರತಿಷ್ಠಾಪಿಸಲಾದ ಪರಿಸರ ಸ್ನೇಹಿ ಮಣ್ಣಿನ ಗಣಪ.   

ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರಳವಾಗಿ ಗಣೇಶ ಉತ್ಸವ ನಡೆಯುತ್ತಿದೆ.

ನಗರದ ಚಂದ್ರಮೌಳೇಶ್ವರ ವೃತ್ತ, ಗಾಂಧಿವೃತ್ತ, ಶೆಟ್ಟಿಭಾವಿ ಚೌಕ್, ಹರಿಹರ ರಸ್ತೆ, ಮಹಾವೀರ್ ವೃತ್ತದ ಬಳಿ ಪ್ರತಿ ವರ್ಷ ಬೃಹತ್ ಗಾತ್ರದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಈ ಬಾರಿ ಅನೇಕ ಕಡೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿಲ್ಲ. ತೀನ್ ಕಂದಿಲ್ ಬಳಿ ಬೃಹದಾಕಾರದ ವಿನೂತನ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಚಿಕ್ಕ ಗಾತ್ರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಬೃಹತ್ ಗಾತ್ರದ ಗಣೇಶ ಪ್ರತಿಷ್ಠಾಪನೆಯಿಂದ ರಸ್ತೆ ಮಧ್ಯೆ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಡಿಜೆಗಳ ಹಾಡು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಶಬ್ದ ಮಾಲಿನ್ಯ ಉಂಟಾಗಿ ಚಿಕ್ಕ ಮಕ್ಕಳಿಗೆ, ವೃದ್ಧರಿಗೆ ಶಬ್ದ ಮಾಲಿನ್ಯದಿಂದ ಕಿರಿಕಿರಿ ಉಂಟಾಗುತ್ತಿದ್ದು ಈ ಬಾರಿ ಕಿರಿಕಿರಿ ತಪ್ಪಿದೆ.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಭಾಗದಲ್ಲಿ ಅದ್ದೂರಿತನ ಕಂಡು ಬರುತ್ತಿದೆ. ಊರಿಗೊಂದೇ ಗಣೇಶ ಕೂಡಿಸಬೇಕು ಎಂಬ ಸರ್ಕಾರ ನಿಯಮ ಪಾಲಿಸಿದ್ದು, ದೊಡ್ಡ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್‍ಗೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪರವಾನಗಿ ನೀಡಿದರೂ ಕೆಲವೆಡೆ ಅನುಮತಿ ಪಡೆಯದೆ ಸಾಕಷ್ಟು ಸಮಿತಿಗಳು ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿರುವುದು ಕಂಡುಬಂದಿತು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಾಲ್ಕು ಅಡಿಗಿಂತ ದೊಡ್ಡ ಗಣೇಶ ಪ್ರತಿಷ್ಠಾಪನೆ ಮಾಡಬಾರದು ಎಂಬ ಆದೇಶ ಕೆಲವೆಡೆ ಗಾಳಿಗೆ ತೂರಲಾಗಿದೆ. ರಸ್ತೆ ತುಂಬೆಲ್ಲ ಗಣೇಶ ಪ್ರತಿಷ್ಠಾ‍ಪನೆ ಒಂದೆಡೆ ಸರ್ಕಾರ ಗಣೇಶ ಚತುರ್ಥಿ ಆಚರಣೆಗೆ ವಿಧಿಸಿದ ನಿಯಮಗಳಿಂದ ಹಬ್ಬದ ಸಂಭ್ರಮವೂ ಕಡಿಮೆಯಾಗಿರುವುದು ಕಂಡುಬಂದಿತು.

ಕಳೆದ ವರ್ಷ ಆಚರಣೆಗೆ ಸಂಪೂರ್ಣ ವಿರಾಮ ನೀಡಿದ್ದರೆ ಈ ಬಾರಿ ಷರತ್ತು ಬದ್ಧ ಅನುಮತಿ ಸಿಕ್ಕಿರುವುದು ಕೆಲ ಗಜಾನನ ಸಮಿತಿಗಳಿಗೆ ಸಮಾಧಾನ ತಂದಿದೆ. ರಾಯಚೂರು ನಗರದಲ್ಲಿ 35 ವಾರ್ಡ್‍ಗಳಿಗೆ ಒಂದರಂತೆ ಅನುಮತಿ ನೀಡಿದರೆ, ಇಡೀ ತಾಲ್ಲೂಕಿನಾದ್ಯಂತ 250ಕ್ಕೂ ಅಧಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅನುಮತಿ ಕೋರಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಕೆಲವರಿಗೆ ಮಾತ್ರ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಉಳಿದವರು ಅನುಮತಿ ದೊರೆಯದಿದ್ದರೂ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಯಾವುದೇ ಮೆರವಣಿಗೆ ನಡೆದಿಲ್ಲ. ವಾದ್ಯವೃಂದ, ತಮಟೆ ಡೊಳ್ಳು, ನಾಸಿಕ್ ಡೋಲು, ಡಿಜೆ ಪಟಾಕಿ ಸದ್ದು ಇಲ್ಲ. ಹೆಚ್ಚಿನ ಕಡೆ ಗಣೇಶ ಪ್ರತಿಷ್ಠಾಪನೆ ಮಾಡಿಲ್ಲ ವಂತಿಗೆ ವಸೂಲಿ ಕಡಿವಾಣ ಬಿದ್ದಿದೆ. ಹಣ್ಣು ಬಾಳೆ ಕಂಬ, ತಳಿರು ತೋರಣ ಶೃಂಗಾರ, ಗಂಟೆ ಜಗಟೆ ಶಂಕವಾದ್ಯ, ಕೊಂಬು ಕಹಳೆ ವಾದ್ಯ ಶಬ್ದ ಮಾತ್ರ ಕೇಳಿಸುತ್ತಿದೆ.

ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಿ ಗಲಾಟೆಯಾಗದಂತೆ ನಿಗಾ ವಹಿಸುತ್ತಿದ್ದಾರೆ. ಎಲ್ಲಾ ಗಣಪ 5ನೇ ದಿನ್ಕಕೆ ಸೀಮಿತವಾಗಿದೆ. ನಗರದ ಹಲವೆಡೆ ಗಣೇಶ ಪ್ರತಿಷ್ಠಾಪನೆ ಮಾಡಿದ್ದು ಭಕ್ತಿ ಭಾವದಿಂದ ವಿಘ್ನವನ್ನು ನಿವಾರಿಸಲು ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಕೋವಿಡ್ ನಡುವೆ ಗಣೇಶನನ್ನು ವಿಧಿ ವಿಧಾನದ ಮೂಲಕ ಬರಮಾಡಿಕೊಂಡಿದ್ದು, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಈ ಬಾರಿ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.