ADVERTISEMENT

ಮಾನ್ವಿ: ಹಸಿರಿನ ತಾಣ ಪ್ರಗತಿ ಉದ್ಯಾನ

ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳ ಸಸ್ಯ ಪ್ರೀತಿಗೆ ನಾಗರಿಕರ ಮೆಚ್ಚುಗೆ

ಬಸವರಾಜ ಬೋಗಾವತಿ
Published 25 ಜುಲೈ 2021, 4:34 IST
Last Updated 25 ಜುಲೈ 2021, 4:34 IST
ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪಕ್ಕದ ಉದ್ಯಾನದಲ್ಲಿ ಗಿಡಗಳ ಆರೈಕೆಯಲ್ಲಿ ತೊಡಗಿರುವ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ
ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪಕ್ಕದ ಉದ್ಯಾನದಲ್ಲಿ ಗಿಡಗಳ ಆರೈಕೆಯಲ್ಲಿ ತೊಡಗಿರುವ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ   

ಮಾನ್ವಿ:ಪಟ್ಟಣದ ಕೆನಾಲ್ ರಸ್ತೆಯಲ್ಲಿರುವ ಬಸವ ಐಟಿಐ ಹಾಗೂ ಪ್ರಗತಿ ಕಾಲೇಜು ಪಕ್ಕದ ಉದ್ಯಾನ ಈಗ ಎಲ್ಲರ ಅಚ್ಚುಮೆಚ್ಚಿನ ತಾಣ.

ದಶಕದ ಹಿಂದೆ ಬಡಾವಣೆಯ ಉದ್ಯಾನಕ್ಕೆ ಮೀಸಲಿಟ್ಟಿದ್ದ ಖಾಲಿ ಜಾಗ ಈಗ ಮರ-ಗಿಡಗಳಿಂದ ಗಮನ ಸೆಳೆಯುತ್ತಿದೆ. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ನೆಟ್ಟು ಬೆಳೆಸಿದ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ತಂಪಾದ ಗಾಳಿ, ನೆರಳು ಉದ್ಯಾನ ಪ್ರವೇಶಿಸಿದವರ ಮನಕ್ಕೆ ಹಿತಕರ ಭಾವ ಮೂಡಿಸುತ್ತದೆ. ಬಸವರಡ್ಡಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಈ ಉದ್ಯಾನದ ರಕ್ಷಣೆ ಹಾಗೂ ಬೆಳವಣಿಗೆಗೆ ಹೆಚ್ಚು ಶ್ರಮಿಸಿದ್ದಾರೆ. ಗಿಡಗಳ ಆರೈಕೆ ಇವರ ನಿತ್ಯ ಕಾಯಕದ ಭಾಗವಾಗಿದೆ. ಸ್ವಂತ ಖರ್ಚಿನಲ್ಲಿ ಸಸಿಗಳನ್ನು ನೆಟ್ಟು ಆರೈಕೆ ಮಾಡುವುದರ ಜತೆಗೆ ಉದ್ಯಾನದಲ್ಲಿ ಸುಸಜ್ಜಿತ ಆಸನಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಉದ್ಯಾನದಲ್ಲಿ ಸಸಿಗಳನ್ನು ನೆಟ್ಟರೆ ಉತ್ತಮ ಆರೈಕೆಯಿಂದ ಬೆಳೆಯುವ ಖಾತರಿ ಸ್ಥಳೀಯರಲ್ಲಿದೆ. ಕಾರಣ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಮ್ಮ ಜನ್ಮದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಉದ್ಯಾನದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ.

ADVERTISEMENT

ಕಾಲೇಜಿಗೆ ಭೇಟಿ ನೀಡಿರುವ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಈ ಉದ್ಯಾನದ ಬಗ್ಗೆ ಮೆಚ್ಚುಗೆ, ಪ್ರೋತ್ಸಾಹದ ನುಡಿಗಳನ್ನು ಹೇಳಿದ್ದಾರೆ. ಉದ್ಯಾನದಲ್ಲಿ ಈಗ 50 ಕ್ಕೂ ಅಧಿಕ ವಿವಿಧ ಮರ–ಗಿಡಗಳಿವೆ. ವೃದ್ಧರು ಹಾಗೂ ಮಕ್ಕಳು ಬಿಡುವಿನ ವೇಳೆಯಲ್ಲಿ ಪ್ರಗತಿ ಉದ್ಯಾನದ ಕಡೆಗೆ ಧಾವಿಸುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಓದಿಗೆ ಪ್ರಶಾಂತ ಸ್ಥಳವಾಗಿದೆ.

‘ಹಲವು ಬಡಾವಣೆಗಳಲ್ಲಿ ಉದ್ಯಾನಕ್ಕೆ ಮೀಸಲಾದ ಜಾಗದಲ್ಲಿ ಮರ–ಗಿಡಗಳನ್ನು ಬೆಳೆಸುವುದು ಕೇವಲ ಪುರಸಭೆಯ ಜವಾಬ್ದಾರಿ ಎಂದು ಭಾವಿಸುವುದು ತಪ್ಪು. ಸಾರ್ವಜನಿಕರೂ ಸಹ ಉದ್ಯಾನಗಳ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂಬುದು ತಿಪ್ಪಣ್ಣ ಎಂ.ಹೊಸಮನಿ ಅವರ ಅಭಿಪ್ರಾಯ.

ಕಾಲೇಜು ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಾದರಿ ಉದ್ಯಾನ ಬೆಳೆಸಿದ ತಿಪ್ಪಣ್ಣ ಎಂ.ಹೊಸಮನಿ ಅವರ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.