ADVERTISEMENT

ಕುಟುಂಬದ ಯೋಗಕ್ಷೇಮ ಕೂಡಾ ಆಲಿಸಿ: ಶರಣ್ಪ ಜಿ. ಸಲಹೆ

ಪೊಲೀಸ್‌ ಧ್ವಜ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 13:06 IST
Last Updated 2 ಏಪ್ರಿಲ್ 2019, 13:06 IST
ರಾಯಚೂರು ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಧ್ವಜಾ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಪೊಲೀಸ್‌ ಉಪ ನಿರೀಕ್ಷಕ ಶರಣಪ್ಪ ಜಿ. ಮಾತನಾಡಿದರು
ರಾಯಚೂರು ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಧ್ವಜಾ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಪೊಲೀಸ್‌ ಉಪ ನಿರೀಕ್ಷಕ ಶರಣಪ್ಪ ಜಿ. ಮಾತನಾಡಿದರು   

ರಾಯಚೂರು: ಹಗಲಿರುಳು ಕರ್ತವ್ಯದಲ್ಲಿ ನಿರತರಾಗುವ ಪೊಲೀಸರು ತಮ್ಮ ಕುಟುಂಬದವರ ಯೋಗಕ್ಷೇಮವನ್ನು ಕೂಡಾ ಆಲಿಸಲು ಸಮಯ ಮೀಸಲಿಡಬೇಕು ಎಂದು ನಿವೃತ್ತ ಪೊಲೀಸ್‌ ಉಪ ನಿರೀಕ್ಷಕ ಶರಣಪ್ಪ ಜಿ. ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಪೊಲೀಸ್‌ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಕುಟುಂಬದ ಕಾಳಜಿ ವಹಿಸುವುದು ಕೂಡಾ ವೈಯಕ್ತಿಕ ಜವಾಬ್ದಾರಿ ಆಗಿರುತ್ತದೆ. ಕುಟುಂಬದ ಸದಸ್ಯರ ಬೆಂಬಲವಿದ್ದರೆ ಕರ್ತವ್ಯದಲ್ಲಿ ಇನ್ನಷ್ಟು ಗಟ್ಟಿಯಾಗಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯ. ಪೊಲೀಸ್‌ ಇಲಾಖೆಯ ಕರ್ತವ್ಯ ಹಾಗೂ ಕುಟುಂಬ ಎರಡರಲ್ಲಿ ಯಾವುದನ್ನೂ ನಿರ್ಲಕ್ಷಿಸಬಾರದು ಎಂದು ಅನುಭವವನ್ನು ಹಂಚಿಕೊಂಡರು.

ADVERTISEMENT

ಪೊಲೀಸ್‌ ಕಾಯ್ದೆ–1965 ಜಾರಿಗೆ ಬಂದಿರುವ ದಿನವನ್ನು ಪೊಲೀಸ್‌ ಧ್ವಜ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವುದು ಈ ಮೊದಲು ನಿರಾಳವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಹೆಚ್ಚು ಒತ್ತಡ ನಿರ್ಮಾಣವಾಗುತ್ತಿದೆ ಎಂದರು.

ಪೊಲೀಸರಿಗೆ ಅನುಕೂಲ ಕಲ್ಪಿಸಲು ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರಿಗೆ ಗರಿಷ್ಠ ₹2 ಲಕ್ಷ ಚಿಕಿತ್ಸೆಗಾಗಿ ಭರಿಸಲಾಗುತ್ತದೆ. ಒತ್ತಡ ನಿರ್ವಹಣೆ ಮಾಡುವ ಉದ್ದೇಶಕ್ಕಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವಿಶೇಷ ಶಿಬಿರ ಅಥವಾ ತರಬೇತಿಗಳನ್ನು ಆಯೋಜಿಸಬೇಕು. ಮುಖ್ಯವಾಗಿ ಒತ್ತಡ ನಿರ್ವಹಣೆ ಮಾಡಿಕೊಳ್ಳಲು ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಪೊಲೀಸರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ಸಾರ್ವಜನಿಕರು ಪೊಲೀಸರ ಸಹಾಯ ಕೋರಿ ಬರುತ್ತಾರೆ. ಕಚೇರಿಯ ಅವಧಿಯಲ್ಲಿ ಜನರೊಂದಿಗೆ ಚೆನ್ನಾಗಿ ಮಾತನಾಡುವ ಕಲೆ ಬೆಳೆಸಿಕೊಳ್ಳಬೇಕು. ಜನರೊಂದಿಗೆ ಸ್ಪಂದಿಸಿ ಮಾತನಾಡಿದರೆ ಇಲಾಖೆ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ವರದಿ ವಾಚನ ಮಾಡಿದರು.ಜಿಲ್ಲಾಧಿಕಾರಿ ಶರತ್‌ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ನಿಖಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.