ADVERTISEMENT

‘ಬೋಧನೆ ಭಾವನಾತ್ಮಕವಾಗಿರಲಿ’

ಖಾಸಗಿ ಶಿಕ್ಷಕರು, ಉಪನ್ಯಾಸಕರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:38 IST
Last Updated 25 ಅಕ್ಟೋಬರ್ 2021, 3:38 IST
ಸಿರವಾರದಲ್ಲಿ ಖಾಸಗಿ ಶಾಲೆ ಶಿಕ್ಷಕರು, ಖಾಸಗಿ ಕಾಲೇಜು ಉಪನ್ಯಾಸಕರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲಾಯಿತು
ಸಿರವಾರದಲ್ಲಿ ಖಾಸಗಿ ಶಾಲೆ ಶಿಕ್ಷಕರು, ಖಾಸಗಿ ಕಾಲೇಜು ಉಪನ್ಯಾಸಕರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲಾಯಿತು   

ಸಿರವಾರ: ‘ಶಿಕ್ಷಕರಾದವರು ಬಾಗಿಯೇ ವಿದ್ಯೆ ನೀಡುವ ಜತೆಗೆ ವಿಷಯವನ್ನು ಭಾವನೆಗಳೊಂದಿಗೆ ಬೋಧನೆ ಮಾಡಿದರೆ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ಮುಟ್ಟುತ್ತದೆ’ ಎಂದು ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.

ಪಟ್ಟಣದ ವಿದ್ಯಾವಾಹಿನಿ ಶಾಲೆಯಲ್ಲಿ ಶಿವನಗೌಡ ನಾಯಕ ಅಭಿಮಾನಿ ಬಳಗ, ದೇವದುರ್ಗ, ಮಾನ್ವಿ, ಸಿರವಾರ ತಾಲ್ಲೂಕುಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ಬೆಂಗಳೂರಿನ ಇಸ್ಕಾನ್‌ನ ಅಕ್ಷಯ ಪಾತ್ರೆ ಸಂಸ್ಥೆಯ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಖಾಸಗಿ ಶಾಲೆ ಶಿಕ್ಷಕರು, ಖಾಸಗಿ ಕಾಲೇಜು ಉಪನ್ಯಾಸಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ಯಂತ್ರಗಳಂತೆ ಪಠ್ಯಕ್ರಮವನ್ನು ಮಾತ್ರ ಪಾಠ ಮಾಡದೇ ತಮ್ಮೊಳಗಿರುವ ವಿಶೇಷ ಜ್ಞಾನದಿಂದ ‘ಕೊಡದಿಂದ ತಂಬಿಗೆಗೆ ನೀರು ತುಂಬುವಂತೆ’ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಭಾವನಾತ್ಮಕವಾಗಿ ಪಾಠ ಮಾಡಬೇಕು. ಆಗ ನಾವೂ ಕಲಿಯುವುದರ ಜತೆಗೆ ಮಕ್ಕಳನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ’ ಎಂದರು. ಧಾರವಾಡ ಮಹೇಶ ಮಶ್ಯಾಳ್ ಅವರು ಮಾತನಾಡಿ,‘ಬೋಧ ನೆಯನ್ನು ಉದ್ಯೋಗವಾಗಿ ನೋಡದೇ ಕರ್ತವ್ಯ, ನಿಷ್ಠೆಯಿಂದ ಮಾಡಿದರೆ ಶೈಕ್ಷಣಿಕ ಕ್ಷೇತ್ರ ಉನ್ನತಿಯಾಗಲು ಸಾಧ್ಯ’ ಎಂದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರ್ ಮಾತನಾಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಮೂರು ತಾಲ್ಲೂಕುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 1950 ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಇರಕಲ್ ಶಿವಶಕ್ತಿ ಪೀಠದ ಬಸವಪ್ರಭು ಸ್ವಾಮಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಬಸವರಾಜ, ನರಸಿಂಹರಾವ್ ಕುಲಕರ್ಣಿ, ಜಕ್ಕಲದಿನ್ನಿ ಮಲ್ಲಿಕಾರ್ಜುನ, ವೀರೇಶ ನಾಯಕ ಬೆಟ್ಟದೂರು, ಚಂದ್ರಶೇಖರ ಬಲ್ಲಟಗಿ, ಶರ್ಫುದ್ದೀನ್ ಮಾನ್ವಿ, ಬಸವರಾಜ ಪಾಟೀಲ ವಕೀಲ ಗಾಣದಾಳ, ವೆಂಕಟರೆಡ್ಡಿ ಬಲ್ಕಲ್, ಪ್ರಕಾಶ ಪಾಟೀಲ್, ರಮೇಶ ಶೆಟ್ಟಿ, ರಮೇಶ ಚಿಂಚರಕಿ ಸೇರಿದಂತೆ ಖಾಸಗಿ ಶಾಲೆ ಮುಖ್ಯಸ್ಥರು, ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.