ADVERTISEMENT

ಸಿದ್ಧಾಂತ ಬದಿಗೊತ್ತಿ ಜಾತಿಗಳ ಮೇಲೆ ರಾಜಕಾರಣ: ಗೋ ಮಧುಸೂದನ ಕಳವಳ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 7:31 IST
Last Updated 21 ಜುಲೈ 2025, 7:31 IST
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು   

ರಾಯಚೂರು: ‘ತತ್ವ ಸಿದ್ಧಾಂತಗಳಿಗಾಗಿ ಹೋರಾಟ ಮಾಡುವುದೇ ನಿಜವಾದ ರಾಜಕಾರಣ. ಆದರೆ, ಪ್ರಸ್ತುತ ಸಿದ್ಧಾಂತ ಬದಿಗೊತ್ತಿ ಜಾತಿಗಳ ಮೇಲೆಯೇ ರಾಜಕಾರಣ ನಡೆದಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ ಮಧುಸೂದನ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿಪಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಪ್ರಪಂಚದಲ್ಲಿ ವಂಶವಾಹಿ ತಳಿಯ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ. ಹಿಂದೆ ಬ್ರಿಟಿಷರು ಜನಾಂಗಗಳಲ್ಲೂ ವಂಶವಾಹಿ ತಳಿಗಳನ್ನು ಕಾಣುತ್ತಿದ್ದರು. ಮರಾಠಾ ರೆಜಿಮೆಂಟ್, ಗುರ್ಖಾ ರೆಜಿಮೆಂಟ್, ಸಿಖ್‌ ರೆಜಿಮೆಂಟ್‌ ವಾಸ್ತವದಲ್ಲಿ ಇವು ವಂಶವಾಹಿ ತಳಿಗಳೇ ಆಗಿವೆ. ಈ ತಳಿಯ ಜನಾಂಗದವರು ಹುಟ್ಟು ಹೋರಾಟಗಾರರಾಗಿದ್ದರು. ರಕ್ತ ಹರಿಸಲು ಹಾಗೂ ರಕ್ತ ಕೊಡಲು ಸಿದ್ಧರಾಗಿರುತ್ತಿದ್ದರು. ಇಂದು ಅಂತಹ ತಳಿಗಳ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ’ ಎಂದರು.

ADVERTISEMENT

‘ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗಬಹುದು ಅಂದು ಕೊಂಡಿದ್ದಾರೆ. ಆದರೆ, ಅದು ಸಿದ್ಧಾಂತಕ್ಕೆ ಬದ್ಧವಾಗಿರುವ ರಾಜಕಾರಣವಲ್ಲ. ಸೀಟು ಹೊಂದಾಣಿಕೆ, ರಾಜಕೀಯ ಜೋಡಣೆ ಎನ್ನುವುದು ರಾಜಕಾರಣವಲ್ಲ’ ಎಂದು ಹೇಳಿದರು.

‘ಬ್ರಾಹ್ಮಣರೆಂದರೆ ಪುರೋಹಿತ ಶಾಹಿಗಳು. ಪುರೋ ಎಂದರೆ ಭವಿಷ್ಯ. ಭವಿಷ್ಯದ ಹಿತವನ್ನು ಕೇಳುವವರೇ ಬ್ರಾಹ್ಮಣರು. ಸ್ವಹಿತಕ್ಕಾಗಿ ಬ್ರಾಹ್ಮಣರಲ್ಲಿ ಯಾವುದೇ ಮಂತ್ರಗಳಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಮಂತ್ರಗಳಿವೆ. ಬ್ರಾಹ್ಮಣ ಸಮಾಜ ಪ್ರತಿಯೊಬ್ಬರ ಹಿತವನ್ನೂ ಬಯಸುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ತತ್ವ ಸಿದ್ಧಾಂತ ಆಧಾರಿತ ರಾಜಕೀಯ ಕಡಿಮೆಯಾಗುತ್ತಿದೆ. ಅದನ್ನು ಸರಿಪಡಿಸುವ ಶಕ್ತಿ ಮತ್ತು ಸಾಮರ್ಥ್ಯ ಬ್ರಾಹ್ಮಣ ಸಮಾಜಕ್ಕೆ ಇದೆ’ ಎಂದು ತಿಳಿಸಿದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ‘ಜನಪ್ರತಿನಿಧಿಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗಿರುತ್ತಾರೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿ ಇದ್ದರೂ ಬ್ರಾಹ್ಮಣ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ’ ಎಂದು ತಿಳಿಸಿದರು.

ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ರಮೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸುಗೋಡು ಜಯಸಿಂಹ, ಮಹಾನಗರಪಾಲಿಕೆ ಪ್ರಭಾರ ಅಧ್ಯಕ್ಷ ಸಾಜೀದ್‌ ಸಮೀರ್, ಬ್ರಾಹ್ಮಣ ಮಹಾಸಭಾದ ಜಿಲ್ಲಾ ಮಹಾಪೋಷಕ ನರಸಿಂಗರಾವ್ ದೇಶಪಾಂಡೆ, ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ಜಿಲ್ಲಾ ಸಂಚಾಲಕ ವೇಣುಗೋಪಾಲ, ಸಯಮೀಂದ್ರ ಕುಲಕರ್ಣಿ, ಅರವಿಂದ ಕುಲಕರ್ಣಿ, ವೆಂಕಟೇಶ ದೇಸಾಯಿ, ಆನಂದತೀರ್ಥ ಫಡ್ನಿಸ್, ಸದಾನಂದ ಪ್ರಭು, ಪ್ರಾಣೇಶ ಮುತಾಲಿಕ, ಸುನೀತಾ ಕಕ್ಕೇರಿ, ಕಿಶನರಾವ್, ಗೋವಿಂದರಾವ್ ಆಲಂಪಲ್ಲಿ, ಗುರುರಾಜ ಆಚಾರ್ಯ, ನರಸಿಂಹರಾವ ಕುಲಕರ್ಣಿ, ವೆಂಕಟೇಶ ಕೋಲಾರ, ಶ್ರೀನಿವಾಸ ದೇಸಾಯಿ ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಜನಪ್ರತಿನಿಧಿಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗಿರುತ್ತಾರೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಬಸನಗೌಡ ದದ್ದಲ್‌ ರಾಯಚೂರು ಗ್ರಾಮೀಣ ಶಾಸಕ
ವಿಪಶ್ರೀ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಎಸ್‌.ಕೃಷ್ಣನ್ ಹಾಗೂ ನಿವೃತ್ತ ಉಪನ್ಯಾಸಕಿ ಕಲಾವತಿ ರಾಘವೇಂದ್ರಾಚಾರ್ ಅವರಿಗೆ ವಿಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ತ್ರಿವಿಕ್ರಮ ಜೋಶಿ ಡಾ.ಸಂಜಯ ಕೆ ವಿಜಯೇಂದ್ರ ಕುಕನೂರು ಹಾಗೂ ಸುಪ್ರಿಯಾ ಪಿ ಅವರನ್ನು ಸನ್ನಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.