ADVERTISEMENT

ಮೆಣಿಸಿನಕಾಯಿ ಉತ್ತಮ ಇಳುವರಿ: ಲಾಭದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 20:00 IST
Last Updated 8 ಏಪ್ರಿಲ್ 2021, 20:00 IST
ಶಕ್ತಿನಗರ ಬಳಿಯ ಯರಗುಂಟ ಗ್ರಾಮದ ರೈತ ತಿಮ್ಮಾರೆಡ್ಡಿ ಯಾದವ ಅವರು ತಮ್ಮ ಜಮೀನಿನಲ್ಲಿ ಮೆಣಿಸಿನಕಾಯಿ ಬೆಳೆದಿರುವುದು
ಶಕ್ತಿನಗರ ಬಳಿಯ ಯರಗುಂಟ ಗ್ರಾಮದ ರೈತ ತಿಮ್ಮಾರೆಡ್ಡಿ ಯಾದವ ಅವರು ತಮ್ಮ ಜಮೀನಿನಲ್ಲಿ ಮೆಣಿಸಿನಕಾಯಿ ಬೆಳೆದಿರುವುದು   

ಯರಗುಂಟ (ಶಕ್ತಿನಗರ): ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಣಿಸಿನಕಾಯಿ ಬೆಳೆ ಕೈಗೆ ಬಂದಿದೆ. ಯರಗುಂಟ ಗ್ರಾಮದ ರೈತ ತಿಮ್ಮಾರೆಡ್ಡಿ ಯಾದವ ಅವರು, ಯೂನಿಸಂ ಶೀಡ್ ಮೆಣಿಸಿನಕಾಯಿಯನ್ನು ಬೆಳೆದು ಉತ್ತಮ ಲಾಭ ಪಡೆಯಲು ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರಿನಲ್ಲಿ ₹ 20 ಸಾವಿರ ವೆಚ್ಚದ ಪಿಎಚ್‌ಎಸ್‌ ಶೀಡ್‌ ಬೀಜಗಳನ್ನು ತಂದು, 4 ಎಕರೆ ಜಮೀನಿನಲ್ಲಿ ಯೂನಿಸಂ ಶೀಡ್‌ ಮೆಣಿಸಿನಕಾಯಿ ಬೆಳೆದಿದ್ದಾರೆ. ಬೆಳೆಗಾಗಿ ₹ 2 ಲಕ್ಷ ಖರ್ಚು ಮಾಡಿದ್ದಾರೆ. ಆದರೆ, ಬೆಲೆ ಕುಸಿತದಿಂದ ಮೆಣಿಸಿನಕಾಯಿ ಬೆಳೆಗಾರರಿಗೆ ಖಾರವಾಗಿ ಪರಿಣಮಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಕರೆಗೆ ₹ 70 ಸಾವಿರ ವೆಚ್ಚ ಮಾಡಿದ್ದೇವೆ. ಇಳುವರಿ ಎಕರೆಗೆ 10 ಕ್ವಿಂಟಾಲ್ ಬಂದಿದೆ. ಧಾರಣೆಯು ಪ್ರತಿ ಕ್ವಿಂಟಾಲ್‌ಗೆ ₹ 16 ಸಾವಿರ ಬೆಲೆ ಇತ್ತು. ಇದೀಗ ₹ 11 ಸಾವಿರ ಬೇಡಿಕೆ ಇದೆ. ತಿಂಗಳ ಹಿಂದೆ ದುಪ್ಪಟ್ಟು ಬೆಲೆಯನ್ನು ಕಂಡಿದ್ದ ಮೆಣಿಸಿನಕಾಯಿ ಧಾರಣೆ ಏಕಾಏಕಿ ಕಡಿಮೆಯಾಗಿರುವುದು ತುಂಬಾ ತೊಂದರೆಯನ್ನು ಉಂಟು ಮಾಡಿದೆ.

ADVERTISEMENT

ಧಾರಣೆ ಕುಸಿತವನ್ನು ಮೆಟ್ಟಿ ನಿಂತು ಮೆಣಿಸಿನಕಾಯಿ ಸಂಗ್ರಹಿಸಿ ಇಡಲು ಕೋಲ್ಡ್‌ ಸ್ಟೋರೇಜ್‌ ಇಲ್ಲ. ಇದರಿಂದ ವ್ಯಾಪಾರಸ್ಥರು ಕೇಳಿದ ಬೆಲೆಗೆ ನೀಡುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ರೈತ ತಿಮ್ಮಾರೆಡ್ಡಿ ಯಾದವ.

ಮೆಣಿಸಿನಕಾಯಿ ಖರೀದಿಯ ಮಾರುಕಟ್ಟೆ ಇಲ್ಲದ ಕಾರಣ, ತೆಲಂಗಾಣದ ಗುಂಟೂರು ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕು. ವಾಹನದ ಬಾಡಿಗೆ ಹಾಗೂ ಇನ್ನಿತರ ವೆಚ್ಚದಿಂದ ಲಾಭಕ್ಕಿಂತ ನಷ್ಟ ಜಾಸ್ತಿಯಾಗುತ್ತಿರುವುದರಿಂದ ಬರಿಗೈಯಲ್ಲಿ ಬರುವಂತೆ ಆಗುತ್ತದೆ. ಇಂತಹ ವಿಷಮ ಸಮಯದಲ್ಲಿ ಅನಿವಾರ್ಯವಾಗಿ ಮೆಣಿಸಿನಕಾಯಿಯನ್ನು ಹೊಲದಲ್ಲಿಯೇ ಸಂಗ್ರಹಿಸಿ ಇಟ್ಟಿದ್ದೇವೆ.

ಮೆಣಿಸಿನಕಾಯಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಿ ಸಂಕಷ್ಟದಲ್ಲಿ ಸಿಲುಕಿರುವ ರೈತರನ್ನು ಪಾರು ಮಾಡಬೇಕು ಎಂದು ಮೆಣಿಸಿನಕಾಯಿ ಬೆಳೆದ ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.