ಥಾವರಚಂದ್ ಗೆಹಲೋತ್
ಬಳ್ಳಾರಿ: ಬೆಂಗಳೂರಿನಿಂದ ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದ ಕಾರಣದಿಂದ ಮತ್ತೆ ಹಾರಾಟ ನಡೆಸಲು ವಿಫಲವಾಗಿದೆ. ಹೀಗಾಗಿ ಅವರ ರಾಯಚೂರು ಪ್ರವಾಸ ಮೊಟಕಾಗಿದೆ.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಇಂದು ಭಾಗವಹಿಸಬೇಕಾಗಿತ್ತು. ಸದ್ಯ ಪ್ರವಾಸ ರದ್ದಾಗಿರುವುದರಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಘಟಿಕೋತ್ಸವದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ.
ಇಂಧನ ಮರುಪೂರಣಕ್ಕಾಗಿ ರಾಜ್ಯಪಾಲರ ಹೆಲಿಕಾಪ್ಟರ್ ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.30–11ರ ಸಮಾರಿನಲ್ಲಿ ಬಂದು ಇಳಿಯಿತು. ಇಂಧನ ಭರ್ತಿ ಬಳಿಕ ಮತ್ತೆ ಹಾರಾಟ ಕೈಗೊಂಡಿತಾದರೂ, ಹವಾಮಾನ ವೈಪರೀತ್ಯದ ಕಾರಣದಿಂದ 10 ನಿಮಿಷಕ್ಕೆ ಮತ್ತೆ ಹಿಂದಿರುಗಿತು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಸ್ತೆ ಮೂಲಕ ರಾಯಚೂರಿಗೆ ತೆರಳುವ ಚಿಂತನೆ ನಡೆಸಲಾಯಿತಾದರೂ, ಕಾರ್ಯಕ್ರಮಕ್ಕೆ ತಲುಪುವುದು ವಿಳಂಬವಾಗಲಿದೆ ಎಂಬ ಕಾರಣಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕವೇ ರಾಜ್ಯಪಾಲರು ಘಟಿಕೋತ್ಸವದಲ್ಲಿ ಭಾಗಿಯಾದರು ಎಂದು ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.