
ಲಿಂಗಸುಗೂರು: ‘ಸ್ಥಳೀಯ ಮುಖಂಡರಿಂದ ಮೂರು ಲಕ್ಷ ರೂಪಾಯಿ ಪಡೆದುಕೊಂಡೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು’ ಎಂದು ಕಾಂಗ್ರೆಸ್ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಜಗದೀಶಗೌಡ ಪಾಟೀಲ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಕೆಆರ್‌ಪಿ ಪಕ್ಷ ಸೇರಲು ಎಂಎಲ್ಸಿ ಪಿಎ 50 ಲಕ್ಷ ರೂಪಾಯಿ ಆಫರ್ ನೀಡಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರೋಪ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಗೋವಿಂದ ನಾಯಕ ಅವರೇ ಸ್ಥಳೀಯ ಮುಖಂಡರಿಬ್ಬರಿಂದ ₹ 3 ಲಕ್ಷ ಪಡೆದುಕೊಂಡೇ ಕಾಂಗ್ರೆಸ್ ಸೇರಿದ್ದಾರೆ’ ಎಂದರು.
‘ಕಾಂಗ್ರೆಸ್ ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಘಟಕಗಳಿಗೆ ಆಯಾ ಘಟಕದ ಜಿಲ್ಲಾಧ್ಯಕ್ಷರೇ ನೇಮಕ ಮಾಡಿದ್ದಾರೆ. ಆದರೆ ಪದಾಧಿಕಾರಿಗಳ ನೇಮಕ ಅನಧಿಕೃತವೆಂದು ಹೇಳಿಕೆ ನೀಡಿರುವುದು ಸರಿಯಲ್ಲ. ಗೋವಿಂದ ನಾಯಕ ಅವರು ಬಿಜೆಪಿ, ಆರ್‌ಎಸ್‌ಎಸ್ ಮನಸ್ಥಿತಿಯಿಂದ ಹೊರಗೆ ಬರಲು ಆಗುತ್ತಿಲ್ಲ. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ 5 ಬಾರಿ ಶಾಸಕರಾಗಿದ್ದವರು. ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಬಿಡಬೇಕು. ದೊಡ್ಡವರ ವಿರುದ್ಧ ಮಾತನಾಡಿದರೆ ದೊಡ್ಡವರರಾಗಲು ಸಾಧ್ಯವಿಲ್ಲ’ ಎಂದರು.
‘ಬಿಜೆಪಿಯಲ್ಲಿದ್ದ ಡಿ.ಎಸ್.ಹೂಲಗೇರಿ ಅವರನ್ನು ಅಮರೇಗೌಡ ಬಯ್ಯಾಪುರ ಅವರು ಕಾಂಗ್ರೆಸ್‌ಗೆ ಕರೆತಂದು ಮೂರು ಭಾರಿ ಟಿಕೆಟ್ ಕೊಡಿಸಿದ್ದಾರೆ. ಹೂಲಗೇರಿ ತಮ್ಮ ಸ್ವಯಂಕೃತ ತಪ್ಪುಗಳಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಬಯ್ಯಾಪುರ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ನಿರಂತರವಾಗಿ ಮಾಡುತ್ತೇವೆ’ ಎಂದರು.
ಹಿಂದುಳಿದ ವರ್ಗಗಳ ಘಟಕ ತಾಲ್ಲೂಕು ಅಧ್ಯಕ್ಷ ಪ್ರಕಾಶ ಕುರಿ, ಮೋಹನ ಗೋಸ್ಲೆ, ಶರಣಪ್ಪ ಹುನಕುಂಟಿ, ಅಮರೇಶ ನಾಯಕ, ತಿಮ್ಮಣ್ಣ ನಾಯಕ, ವೆಂಕಪ್ಪ ಕಳ್ಳಿಲಿಂಗಸುಗೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.