ADVERTISEMENT

ನೌಕರರ ದಿನಾಚರಣೆಗೆ ಪೂರ್ವಸಿದ್ಧತೆ: ಡಾ.ದುರುಗೇಶ್

ಏಪ್ರಿಲ್ 21ರಂದು ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 13:42 IST
Last Updated 18 ಏಪ್ರಿಲ್ 2022, 13:42 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.   

ರಾಯಚೂರು: ಜಿಲ್ಲೆಯಲ್ಲಿ ಇದೇ ಏಪ್ರಿಲ್‌. 21ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಏಪ್ರಿಲ್ 21 ರಂದು ಪ್ರತಿವರ್ಷ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಆಚರಿಸಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಅಂದು ಬೆಳಿಗ್ಗೆ 10ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶಿಷ್ಟಾಚಾರದಂತೆ ನಡೆಸುವುದಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಪ್ರಶಸ್ತಿ ಪ್ರದಾನ: ಪ್ರತಿವರ್ಷ ಏಪ್ರಿಲ್‌ 21ರ ನಾಗರೀಕ ಸೇವಾ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನ ಆಚರಿಸಲು ಸರ್ಕಾರ ಘೋಷಿಸಿದ್ದು, ಅದರಂತೆ ಅತ್ಯುತ್ತಮ ಸೇವೆ ಸಲ್ಲಿಸುವ ನೌಕರರಿಗೆ ಇದುವರೆಗೂ ಗಣರಾಜ್ಯೋತ್ಸವ ದಿನದಂದು ನೀಡಲಾಗುತ್ತಿತ್ತು.

ಪ್ರಶಸ್ತಿಗಳನ್ನು ಎ,ಬಿ.ಸಿ.ಡಿ ವೃಂದದ ಕಾಯಂ ಸರ್ಕಾರಿ ನೌಕರರ ಉತ್ತಮ ಸೇವೆ ಪರಿಗಣಿಸಿ ನೀಡಲು ನಿರ್ಧರಿಸಲಾಗಿದ್ದು, ಅದರಂತೆ ನಾಗರೀಕರಿಗೆ ಗುಣಮಟ್ಟದ ಸೇವೆ ನೀಡಿರುವುದು, ನಾಗರೀಕ ಸ್ನೇಹಿ, ಭ್ರಷ್ಠಾಚಾರ ರಹಿತ ವಾತಾವರಣ ನಿರ್ಮಾಣ, ಮುಂದಾಳತ್ವ, ಚಲನಶೀಲಗಳ ರಚನೆ, ನಾಗರೀಕರ ಅನುಕೂಲಕ್ಕಾಗಿ ವಿನೂತನ ಪದ್ದತಿ ಅಳವಡಿಕೆ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ ಈ ಸರ್ವೋತ್ತಮ ಪ್ರಶಸ್ತಿ ನೀಡಲಾಗುತ್ತದೆ.

ನಾಗರೀಕರಿಗೆ ವಿಶೇಷ ಸಂದರ್ಭದಲ್ಲಿ ವಿಶೇಷ ರೀತಿಯ ಸೇವೆ ಒದಗಿಸುವುದು, ಕಚೇರಿ ವ್ಯವಸ್ಥೆ,ಪರಿಸರದಲ್ಲಿ ವಿಶಿಷ್ಟ ಸಾಧನೆ, ಇಲಾಖೆ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಹಶೀಲ್ದಾರ್ ಶ್ರೀನಿವಾಸ ಚಾಪೆಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶೇಖ್ ಅಲಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ದತ್ತಾತ್ರೇಯ, ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.