ADVERTISEMENT

‘ಸರ್ಕಾರಿ ನೌಕರರ ನಡತೆ ನಿಯಮ ಪ್ರಸ್ತಾವ ಕೈಬಿಡಿ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 14:51 IST
Last Updated 10 ನವೆಂಬರ್ 2020, 14:51 IST
ರಾಯಚೂರಿನಲ್ಲಿ ಅಖಿಲ ಕರ್ನಾಟಕ ರಾಜ್ಯ ನೌಕರರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಅಖಿಲ ಕರ್ನಾಟಕ ರಾಜ್ಯ ನೌಕರರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ರಾಯಚೂರು: ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ 2020 ಕರಡು ಅಂಶಗಳಲ್ಲಿ ಹಲವಾರು ತೊಡಕು, ಆಕ್ಷೇಪಣೆಗಳಿದ್ದು ನಡತೆ ನಿಯಮಗಳ ಜಾರಿಯ ಪ್ರಸ್ತಾವ ಕೈಬಿಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ನೌಕರರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 1966 ಆಧರಿಸಿ ಇದುವರೆಗೆ ಹಲವಾರು ಸುತ್ತೋಲೆಗಳು ಮತ್ತು ಆದೇಶಗಳು ನೌಕರರ ಅಡತೆಗಳನ್ನು ನಿಯಂತ್ರಿಸಿದ್ದವು. ಈಗ ಪ್ರಕಟಿಸಿರುವ 2020ರ ಕರಡು ನಿಯಮಾವಳಿಗಳಲ್ಲಿ ಹೊಸದೇನಿಲ್ಲ. 1966ರ ನಿಯಮಗಳನ್ನೇ ಪುನರ್ ಸ್ಥಾಪಿಸಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. 1966ರ ನಿಯಮಗಳ ಗಮನಿಸಿದರೆ ನೌಕರರ ಮೂಲ ಹಕ್ಕುಗಳನ್ನು ಮೊಟಕುಗೊಳಿಸುವುದಲ್ಲದೇ ಅವರ ಕುಟುಂಬ ಸದಸ್ಯರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳು ಒಳಗೊಂಡಿದೆ ಎಂದು ದೂರಿದರು.

ಬ್ರಿಟಿಷರ ಕಾಲದ ವಸಾಹಾತುಶಾಹಿ ಮನೋಧೋರಣೆಯಿಂದ ನೌಕರರನ್ನು ನಿಯಂತ್ರಿಸುವ ಅಂಶಗಳನ್ನು ಹೊಂದಿದೆ. ಸ್ವಾತಂತ್ರ್ಯ ಪಡೆದು 70 ವರ್ಷಗಳ ನಂತರವೂ ಸಾಂವಿಧಾನಿಕ ಹಕ್ಕುಗಳಿಗೆ ಬಹುದೊಡ್ಡ ಪೆಟ್ಟು ನೀಡುವ ನಿಯಮಗಳನ್ನೇ ಜಾರಿಗೊಳಿಸಲು ಹೊರಟಿದೆ. ನೌಕರರ ಸೇವಾ ನಿಯಮ ಪರಿಷ್ಕರಿಸಲು ಹೊರಟಾಗ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಗರಿಕ ಮೂಲ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳನ್ನೇ ಉಳಿಸಿಕೊಳ್ಳುವುದರ ಜೊತೆಗೆ ಹೊಸ ಅಂಶಗಳನ್ನು ಸೇರಿಸಿರುವುದು ಆಕ್ಷೇಪಾರ್ಹವಾಗಿದೆ.

ADVERTISEMENT

ನೌಕರರ ನಡತೆಯನ್ನು ನಿಯಂತ್ರಿಸಿ ಉತ್ತಮ, ಪ್ರಜಾಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸುವುದು ಸರಿ. ಆದರೆ ಈ ನಡತೆ ನಿಯಮಗಳು ಬ್ರಿಟಿಷರ ಕಾಲದ ವಸಾಹಾತು ಶಾಹಿ ಆಡಳಿತದ ನಿಯಮದಂತಿದೆ ಎಂದು ದೂರಿದರು.

ಸಂಘದ ಸಂಚಾಲಕ ತಾಯರಾಜ ಮರ್ಚೆಟ್ ಹಾಳ, ಉಪಾಧ್ಯಕ್ಷ ನಾರಾಯಣ, ರಮೇಶ, ಹನುಮಮತಪ್ಪ, ಸೈಯದ್ ಶಹಾಬುದ್ದೀನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.