ADVERTISEMENT

ಡಿಸಿ ಆದೇಶ ಪಾಲನೆ ಮಾಡದ ಕಚೇರಿಗಳು, ಜನಸಂಚಾರ ಯಥಾಸ್ಥಿತಿ, ಎಂದಿನಂತೆ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 15:49 IST
Last Updated 17 ಮಾರ್ಚ್ 2020, 15:49 IST
ರಾಯಚೂರಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಂಡುಬಂದ ದೃಶ್ಯ
ರಾಯಚೂರಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಂಡುಬಂದ ದೃಶ್ಯ   

ರಾಯಚೂರು: ಕೊರೊನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಜನದಟ್ಟಣೆ ಏರ್ಪಡುವ ಜಾಗಗಳಲ್ಲಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೆಲವು ಸರ್ಕಾರಿ ಕಚೇರಿಗಳಲ್ಲಿಯೇ ಅದು ಪಾಲನೆ ಆಗದಿರುವುದು ಕಂಡುಬಂತು.

ಜನದಟ್ಟಣೆ ಏರ್ಪಡದಂತೆ ಎಚ್ಚರಿಕೆ ವಹಿಸಬೇಕಿದ್ದ ಅಧಿಕಾರಿಗಳು ಮುಖಗವುಸು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಉಪನೋಂದಣಾಧಿಕಾರಿ ಕಚೇರಿ ಮತ್ತು ಆರ್‌ಟಿಓ ಕಚೇರಿಗಳಲ್ಲಿ ಕಂಡುಬಂತು. ಆರೋಗ್ಯ ಜಾಗೃತಿಗೆ ಜನರು ವಹಿಸಬೇಕಾದ ಮುನ್ನಚ್ಚರಿಕೆಗಳ ತಿಳಿವಳಿಕೆ ನೀಡಬೇಕಿದ್ದ ಸಿಬ್ಬಂದಿ ಕೂಡಾ ಮೂಕ ಪ್ರೇಕ್ಷಕರಂತೆ ಇದ್ದರು.

ಮೂವರಿಗೆ ತಪಾಸಣೆ:ದುಬೈನಿಂದ ಮರಳಿದ್ದ ಲಿಂಗಸುಗೂರು ತಾಲ್ಲೂಕಿನ ಮೂವರು ವ್ಯಕ್ತಿಗಳು ತಪಾಸಣೆಗೆ ಒಳಪಡುವುದಕ್ಕೆ ನಿರಾಕರಿಸಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ಎಲ್ಲರನ್ನು ರಾಯಚೂರಿಗೆ ಕರೆತಂದು ಮಂಗಳವಾರ ತಪಾಸಣೆಗೆ ಒಳಪಡಿಸಿತು. ಮನೆಗಳಲ್ಲಿಯೇ ಇರಬೇಕು ಎಂದು ಸೂಚನೆ ನೀಡಲಾಗಿದ್ದು, ಈ ಬಗ್ಗೆ ನಿಗಾ ವಹಿಸಲಾಗಿದೆ.

ADVERTISEMENT

ದುಬೈಗೆ ಹೋಗಿ ಮಾರ್ಚ್‌ 3 ರಂದು ಮರಳಿದ್ದ ಸಿರವಾರ ಪಟ್ಟಣದ ಯುವಕ ಕೂಡಾ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರಲಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ಪಡೆದು, ತಪಾಸಣೆಗೆ ಒಳಪಡಿಸಿದರು.

ಕೋವಿಡ್‌ ಸೋಂಕಿನ ಕುರಿತು ಮುನ್ನಚ್ಚರಿಕೆ ಇದ್ದರೂ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಎಂದಿನಂತಿತ್ತು. ಜನಸಂಚಾರದಲ್ಲಿ ವ್ಯತ್ಯಾಸವಾಗಿಲ್ಲ. ವಾಹನ ಸಂಚಾರವೂ ಎಂದಿನಂತೆ ಮುಂದುವರಿದಿದೆ. ಕೇಂದ್ರ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಎಂದಿನಂತಿತ್ತು. ಬಸ್‌ಗಳಲ್ಲಿ ಸಂಚರಿಸುವವರು ಮುಖಗವುಸು ಹಾಗೂ ಕರವಸ್ತ್ರಗಳನ್ನು ಮುಖಕ್ಕೆ ಬಿಗಿದುಕೊಂಡಿರುವುದು ಕಂಡುಬಂತು.

ಎರಡು ವರದಿ ಬರಬೇಕು: ಕೊರೊನಾ ವೈರಸ್‌ ಶಂಕೆಯಿಂದ ರಿಮ್ಸ್‌ನಲ್ಲಿ ದಾಖಲಿಸಿ ನಿಗಾ ವಹಿಸಿರುವ ಮೂವರು ವ್ಯಕ್ತಿಗಳ ಪೈಕಿ ಒಬ್ಬರು ರೋಗಿಯ ಟೆಸ್ಟಿಂಗ್‌ ವರದಿ ನೆಗೆಟಿವ್‌ ಎಂದು ಬಂದಿದೆ. ಇನ್ನೂ ಇಬ್ಬರ ವರದಿಗಳು ಬರಬೇಕಿದೆ. ಪರೀಕ್ಷಾ ವರದಿ ಬಂದಿರುವ ವ್ಯಕ್ತಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.

ಹೆಚ್ಚಿದ ಸಂಖ್ಯೆ: ವಿದೇಶದಿಂದ ಜಿಲ್ಲೆಗೆ ಮರಳಿದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಮಂಗಳವಾರ 64 ರಷ್ಟಾಗಿದೆ. ಮನೆಗಳಲ್ಲಿ ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾದ ಜನರ ಸಂಖ್ಯೆ 186 ರಷ್ಟಿದೆ. ವಿದೇಶದಿಂದ ಮರಳಿದವರ ಮಾಹಿತಿ ಸಂಗ್ರಹ ಇನ್ನೂ ಪ್ರಗತಿಯಲ್ಲಿದೆ. ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.