ದೇವದುರ್ಗ (ರಾಯಚೂರು ಜಿಲ್ಲೆ): ದೇವದುರ್ಗದ ಗ್ರೇಡ್–2 ತಹಶೀಲ್ದಾರ್ ಆರ್.ವೆಂಕಟೇಶ ಅವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ ಸೇವೆಗಳು) ರಾಘವೇಂದ್ರ ಟಿ. ಅವರು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
2024–25ನೇ ಸಾಲಿನಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ವಿವಿಧ ಪಿಂಚಣಿ ಯೋಜನೆಯಡಿ ಅತಿ ಹೆಚ್ಚು ಅರ್ಜಿಗಳನ್ನು (10,470) ವಿಲೇವಾರಿ ಮಾಡಿರುವುದು ಕಂಡುಬಂದಿದ್ದರಿಂದ ಜಿಲ್ಲಾಧಿಕಾರಿಯು ರಾಯಚೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿ ವರದಿ ನೀಡಲು ಸೂಚಿಸಿದ್ದರು.
ಗ್ರೇಡ್–2 ತಹಶೀಲ್ದಾರ್ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನದಿಂದ 2024ರ ಜನವರಿಯಿಂದ ಡಿಸೆಂಬರ್‌ವರೆಗೆ ವಿವಿಧ ಮಾಸಾಶಸನ ಅರ್ಜಿ ವಿಲೇವಾರಿ ಪಟ್ಟಿಯನ್ನು ಪರಿಶೀಲಿಸಿದಾಗ ದೇವದುರ್ಗ ಹೋಬಳಿ ವ್ಯಾಪ್ತಿಯಲ್ಲಿ 12,526 ಅರ್ಜಿಗಳು ವಿಲೇವಾರಿ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಸಂಧ್ಯಾ ಸುರಕ್ಷಾ ಯೋಜನೆಗೆ ಸಂಬಂಧಿಸಿದ ಒಟ್ಟು ಅನರ್ಹ ಅರ್ಜಿಗಳು 8,279, ವೃದ್ಧಾಪ್ಯ ವೇತನ ಯೋಜನೆಯ 3,478 ಅನರ್ಹ ಫಲಾನುಭವಿಗಳಿಗೆ ವಿವಿಧ ಮಾಸಾಶನ ಮಂಜೂರು ಮಾಡಿ ಸರ್ಕಾರಕ್ಕೆ ಸುಮಾರು ₹4 ಕೋಟಿ ನಷ್ಟ ಮಾಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು.
ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಅನರ್ಹ ಫಲಾನುಭವಿಗಳನ್ನು ತಿರಸ್ಕರಿಸಿದ ಅರ್ಜಿಗಳಿಗೂ ಗ್ರೇಡ್–2 ತಹಶೀಲ್ದಾರ್ ಮಾಸಾಶನ ನೀಡಿದ್ದಾರೆ. ತನಿಖೆಗೆ ಒಳಪಡಿಸಿದ 12 ತಿಂಗಳಲ್ಲಿ ₹4 ಕೋಟಿ ನಷ್ಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1) (ಡಿ) ರನ್ವಯ ಅಂತಿಮ ವರದಿಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.