ADVERTISEMENT

ಗ್ರಾಮ ಪಂಚಾಯಿತಿ 2ನೇ ಹಂತ: ಶೇ 77.11 ಮತದಾನ

ಸಿಂಧನೂರು, ಮಸ್ಕಿ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 14:52 IST
Last Updated 27 ಡಿಸೆಂಬರ್ 2020, 14:52 IST
ಲಿಂಗಸುಗೂರು ತಾಲ್ಲೂಕಿನ ಗುಂತಗೋಳ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲು ಕೆಲವರು ವಾಹನಗಳಲ್ಲಿ ಬಂದಿದ್ದರು
ಲಿಂಗಸುಗೂರು ತಾಲ್ಲೂಕಿನ ಗುಂತಗೋಳ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲು ಕೆಲವರು ವಾಹನಗಳಲ್ಲಿ ಬಂದಿದ್ದರು   

ರಾಯಚೂರು: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಸಿಂಧನೂರು, ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಭಾನುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಶೇ 77.11 ರಷ್ಟು ಮತದಾನವಾಗಿದೆ.

ಒಟ್ಟು 4,85,741 ಮತದಾರರ ಪೈಕಿ 3,34,759 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಪುರುಷ ಮತದಾರರಗಿಂತಲೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮತದಾನ ಪ್ರಮಾಣವು ಸರಿಸಮಯವಾಗಿರುವುದು ಗಮನಾರ್ಹ. 1,67,630 ಪುರುಷ ಮತದಾರರು ಹಾಗೂ 1,67,129 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ. ಬೆಳಿಗ್ಗೆ 7 ರಂದ ಸಂಜೆ 5 ರವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ಮೂರು ತಾಲ್ಲೂಕುಗಳಲ್ಲಿ ಒಟ್ಟು 2,47,260 ಮಹಿಳಾ ಮತದಾರರಿದ್ದರು.

ಇನ್ನುಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಸಿಂಧನೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಶೇ 78.62 ರಷ್ಟು ಮತದಾನವಾಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 76.82 ಮತದಾನವಾಗಿದೆ. ಮಸ್ಕಿ ತಾಲ್ಲೂಕಿನಲ್ಲಿ ಶೇ 74.61 ರಷ್ಟು ಮತದಾನವಾಗಿದೆ.

ADVERTISEMENT

ಸಿಂಧನೂರು ತಾಲ್ಲೂಕಿನ ವಿರುಪಾಪುರ ಗ್ರಾಮದ ಮತಗಟ್ಟೆ ಎದುರು ಆರಂಭವಾಗಿದ್ದ ಜಗಳದಿಂದ ಜನರು ಗುಂಪಾಗಿದ್ದರು. ಗುಂಪು ಚದುರಿಸಲು ಪೊಲೀಸರು ಲಘುಲಾಠಿ ಬೀಸಿದ ಪ್ರಕರಣವೊಂದನ್ನು ಹೊರತುಪಡಿಸಿ, ಎಲ್ಲ ಕಡೆಗೂ ಶಾಂತಿಯುತ ಮತದಾನವಾಗಿದೆ. ಪೊಲೀಸರು ಎಲ್ಲೆಡೆಯಲ್ಲೂ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ಮತದಾನಕ್ಕೆ ಬರುತ್ತಿರುವ ಗುಳೆ ಹೋದವರು: ಜಿಲ್ಲೆಯಿಂದ ವಿವಿಧೆಡೆ ಗುಳೆ ಹೋಗಿದ್ದ ಜನರು ಮತದಾನ ಮಾಡಲು ವಾಹನಗಳಲ್ಲಿ ಗುಂಪುಗುಂಪಾಗಿ ಗ್ರಾಮಗಳಿಗೆ ಬರುತ್ತಿದ್ದ ದೃಶ್ಯ ಕಂಡುಬಂತು.

ಲಿಂಗಸುಗೂರು, ಮಸ್ಕಿ ತಾಲ್ಲೂಕಿನ ಗ್ರಾಮಗಳಲ್ಲಿ ಮತದಾರರನ್ನು ಹೊತ್ತು ಬರುತ್ತಿದ್ದ ವಾಹನಗಳ ನೋಟ ಸಾಮಾನ್ಯವಾಗಿತ್ತು. ಕ್ರೂಸರ್, ಜೀಪ್ , ಕಾರುಗಳು ಹಾಗೂ ಖಾಸಗಿ ಬಸ್ಸುಗಳಲ್ಲಿ ಮತದಾರರನ್ನು ಕರೆತರಲಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳೇ ಅವರನ್ನು ಕರೆತಂದಿದ್ದರು.

ಯಾರು ಕರೆಸಿದ್ದಾರೆ ಹಾಗೂ ಖುರ್ಚು ಯಾರು ಭರಿಸುತ್ತಾರೆ ಎನ್ನುವ ಮಾಹಿತಿಯನ್ನು ಮತದಾರರು ಬಿಟ್ಟುಕೊಡಲಿಲ್ಲ. ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಬೆಂಗಳೂರಿಗೆ ಗುಳೆ ಹೋಗಿದ್ದವರು ಮತದಾನ ಮಾಡುವುದಕ್ಕೆ ಬಂದು ಹಕ್ಕು ಚಲಾಯಿಸಿದರು. ಕಾರ್ಮಿಕರನ್ನು ವಾಹನಗಳಲ್ಲಿ ಕರೆತಂದು ನೇರವಾಗಿ ಮತಗಟ್ಟೆಗಳ ಎದುರಿಗೇ ತಂದು ಬಿಡಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.