ADVERTISEMENT

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 15:57 IST
Last Updated 15 ಜುಲೈ 2021, 15:57 IST
ರಾಯಚೂರಿನ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು
ರಾಯಚೂರಿನ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು   

ರಾಯಚೂರು: ಗ್ರಾಮ ಪಂಚಾಯಿತಿ ಕರವಸೂಲಿಗಾರ, ಗುಮಾಸ್ತ ಹುದ್ದೆಯಿಂದ ಗ್ರೇಡ್ 2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಆಯ್ಕೆ ಮೂಲಕ ನೇರ ನೇಮಕಾತಿ ಆದೇಶವನ್ನು ಹಿಂಪಡೆದ ಸರ್ಕಾರದ ಕ್ರಮ ಖಂಡಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಆನಂತರ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೂಲಕ‌ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಸಹಮತ ನೀಡಿದೆ. ಅದರನ್ವಯ ಜುಲೈ 2ರಂದು ನೇಮಕಾತಿ ಆದೇಶ ನೀಡಿದ್ದ ಸರ್ಕಾರ, ಜುಲೈ 3ರಂದು ಆದೇಶ ಹಿಂಪಡೆದಿರುವುದು ಖಂಡನೀಯ ಎಂದರು.

ಸರ್ಕಾರದ ಕ್ರಮದಿಂದ ಮೂರು ದಶಕದಿಂದ ಕೆಲಸ ಮಾಡಿ ನಿವೃತ್ತಿ ಅಂಚಿನಲ್ಲಿರುವವರಿಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಬ್ಬಂದಿಗೆ 10ರಿಂದ 15 ತಿಂಗಳು ವೇತನವಿಲ್ಲದೇ ಸಂಕಷ್ಟ ಸ್ಥಿತಿ ಎದುರಾದಾಗ 15ನೇ ಹಣಕಾಸಿನಲ್ಲಿ ಸಿಬ್ಬಂದಿಗೆ ವೇತನ ಪಾವತಿಸುವಂತೆ ಕಳೆದ ನವೆಂಬರ್ 25ರಂದು ಸರ್ಕಾರ ಆದೇಶ ಮಾಡಿದಾಗ ಸಂತಸದ ವಿಷಯವಾಗಿತ್ತು. ಆದರೆ, ಪಿಡಿಒಗಳು ವೇತನ ಪಾವತಿಸದಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಶಾಸನಬದ್ಧ ಅನುದಾನದಲ್ಲಿ ಸಿಬ್ಬಂದಿ ವೇತನ ಜಮಾ ಮಾಡಬೇಕು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ 25ರಿಂದ 30 ವರ್ಷಗಳಿಂದ ಸೇವೆ ಮಾಡಿದ್ದರೂ ಯಾವುದೇ ಸೇವಾ ನಿಯಮಾವಳಿ ಇಲ್ಲ. ಅನಾರೋಗ್ಯಕ್ಕೆ ತುತ್ತಾದರೆ, ಅಕಾಲಿಕ ಮರಣ ಹೊಂದಿದರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಆದೇಶ ಇದ್ದರೂ ಪಿಡಿಒಗಳು ಜಾರಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾಮ ಪಂಚಾಯಿತಿ ಸಿಬ್ಬಂದಿ ಒಳಪಡಿಸಬೇಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 2017 ಅಕ್ಟೋಬರ್ 31ರವರೆಗೆ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಇಎಫ್‍ಎಂಎಸ್‍ಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಧಣಿ, ಪ್ರಧಾನ ಕಾರ್ಯದರ್ಶಿ ಮೌನೇಶ, ಸಿಐಟಿಯು ಸಂಘಟನೆ ಮುಖಂಡ ಶರಣಬಸವ, ಮಲ್ಲಿಕಾರ್ಜುನ, ಕೆ.ಜಿ.ವೀರೇಶ, ವೀರೇಶಸ್ವಾಮಿ, ಹನುಮಂತಪ್ಪ ಬನ್ನಿಗೋಳ, ಯಮನೂರಪ್ಪ, ಷಣ್ಮುಖಪ್ಪ, ನಿತ್ಯಾನಂದ, ಶಿವರಾಜ ಸ್ವಾಮಿ, ರಮೇಶ ಪಾಟೀಲ, ವೆಂಕೋಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.