ADVERTISEMENT

ಗೊರೇಬಾಳ ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 4:18 IST
Last Updated 2 ಜೂನ್ 2022, 4:18 IST
ಸಿಂಧನೂರು ತಾಲ್ಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು
ಸಿಂಧನೂರು ತಾಲ್ಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು   

ಸಿಂಧನೂರು: ತಾಲ್ಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಭೆ ನಡೆಯಿತು.

21 ಜನ ಸದಸ್ಯರು ಅವಿಶ್ವಾಸಕ್ಕೆ ಸಹಿ ಹಾಕಿದರು. ಇದರಿಂದಾಗಿ ಜೆಡಿಎಸ್‍ ಬೆಂಬಲಿತ ಅಭ್ಯರ್ಥಿ ಅಧಿಕಾರ ಕಳೆದುಕೊಂಡರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ ಗಾದಿಗೇರಲು ಸಜ್ಜಾಗಿದ್ದಾರೆ.

ಒಟ್ಟು 31 ಸದಸ್ಯರ ಸಂಖ್ಯಾಬಲದ ಗೊರೇಬಾಳ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ನಾಗಪ್ರಮೀಳಾ ಅಧ್ಯಕ್ಷರಾಗಿದ್ದರು.

ADVERTISEMENT

ರಸ್ತೆಗೆ ಮರಂ ಹಾಕಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಬೆಂಬಲಿತ ಸದಸ್ಯರೇ ಇವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಜೆಡಿಎಸ್ ಅಧ್ಯಕ್ಷ ಬಸವರಾಜ ನಾಡಗೌಡ ಅವರು ತಮ್ಮ ಪಕ್ಷ ಬೆಂಬಲಿತ ಸದಸ್ಯರ ಜತೆ ಅನೇಕ ಬಾರಿ ಸಭೆ ನಡೆಸಿದ್ದರು. ಅವು ವಿಫಲವಾಗಿದ್ದವು. ಅಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿವೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆರೋಪಿಸಿದ್ದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿಶ್ವಾಸ ಮಂಡನೆಗೆ ನಿರ್ಧಾರ ಮಾಡಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ, ಪ್ರವಾಸಕ್ಕೆ ತೆರಳಿದ್ದರು.

ಈ ವಿಷಯ ತಾಲ್ಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಲಿಂಗಸುಗೂರು ಉಪವಿಭಾಗಾಧಿಕಾರಿ ರಾಹುಲ್ ಸುಂಕನೂರು ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು. 21 ಸದಸ್ಯರು ಅವಿಶ್ವಾಸದ ಪರ ಸಹಿ ಹಾಕಿದರು. ಇನ್ನುಳಿದ 10 ಸದಸ್ಯರು ಗೈರು ಹಾಜರಾಗಿದ್ದಾರೆ. ಇದರಿಂದ ಜೆಡಿಎಸ್ ಬೆಂಬಲಿತ ನಾಗಪ್ರಮೀಳಾ ಅವರು ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಸಭೆ ನಡೆದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.