ADVERTISEMENT

ಮಿಡತೆ ಹಾವಳಿ: ರಾಸಾಯನಿಕ ಸಿಂಪಡಿಸಲು ಸಲಹೆ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರಜ್ಞರ ಸಭೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 16:03 IST
Last Updated 28 ಮೇ 2020, 16:03 IST
ರಾಯಚೂರು ಕೃಷಿ ವಿಶ್ವವಿದ್ಯಾಲಯ
ರಾಯಚೂರು ಕೃಷಿ ವಿಶ್ವವಿದ್ಯಾಲಯ   

ರಾಯಚೂರು: ದೇಶದಲ್ಲಿ ಆತಂಕ ಮೂಡಿಸುತ್ತಿರುವ ಮರುಭೂಮಿ ಮಿಡತೆಯ ಹಾವಳಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಭವನೀಯ ಸಾಧ್ಯಸಾಧ್ಯತೆ ಮತ್ತು ರೈತರಿಗೆ ನೀಡಬೇಕಾದ ಸಲಹೆಗಳ ಕುರಿತು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅಧ್ಯಕ್ಷತೆಯಲ್ಲಿ ಕೀಟಶಾಸ್ತ್ರಜ್ಞರು ಗುರುವಾರ ಸಭೆ ನಡೆಸಿದರು.

ಮಿಡತೆಗಳ ಹತೋಟಿಗಾಗಿ ಜೋರಾಗಿ ಶಬ್ಧಮಾಡಿ (ತಮಟೆ, ಪಾತ್ರೆ ಅಥವಾ ಧ್ವನಿವರ್ಧಕಗಳು) ಮಿಡತೆಗಳನ್ನು ಓಡಿಸಬಹುದು. ಮಿಡತೆಗಳು ರಾತ್ರಿಯಲ್ಲಿ ಮರಗಳಲ್ಲಿ ವಿಶ್ರಮಿಸುವುದರಿಂದ ರಾಸಾಯನಿಕ ಕೀಟನಾಶಕಗಳನ್ನು ಟ್ರ್ಯಾಕ್ಟರ್ ಚಾಲಿತ ಅಥವಾ ಅಗ್ನಿ ಶಾಮಕದಳದಲ್ಲಿ ಉಪಯೋಗಿಸುವ ಯಂತ್ರಗಳಿಂದ ಸಿಂಪಡಿಸಬೇಕು. ಇನ್ನೂ ಮುಂಗಾರು ಹಂಗಾಮು ಆರಂಭವಾಗುವ ಹಂತದಲ್ಲಿರುವ ಕಾರಣ ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಸೂಕ್ತ. ಮಿಡತೆಯ ಬಾಧೆ ಕಂಡು ಬಂದಲ್ಲಿ ರೈತರು ಬೆಳೆಯ ಜೊತೆಗೆ ಬದುಗಳ ಮೇಲೆ ಮತ್ತು ಮರಗಳಿಗೂ ಸಹ ಕೀಟನಾಶಕ ಸಿಂಪಡಿಸುವುದು ಸೂಕ್ತ ಎಂದು ತಿಳಿಸಲಾಗಿದೆ.

ಮಿಡತೆ ನಿರ್ವಹಣೆಗಾಗಿ ಮಿ.ಲೀ. ಪ್ರತಿ ಲೀಟರ್ ನೀರಿಗೆ ಲ್ಯಾಂಬ್ಡ ಸೈಹಲೊಥ್ರೀನ್ 5 ಇಸಿ 1 ಮಿ.ಲೀ., ಕ್ಲೋರೋಪೈರಿಫಾಸ್ 20 ಇಸಿ 2.4 ಮಿ.ಲೀ, ಮೆಲಾಥಿಯಾನ್ 50 ಇಸಿ 3.7 ಮಿ.ಲೀ., ಡೆಲ್ಟಮೆಥ್ರೀನ್ 2.8 ಇಸಿ 1 ಮಿ.ಲೀ., ಫಿಪ್ರೋನಿಲ್ 5 ಎಸ್ ಸಿ ೦.25 ಮಿ.ಲೀ., ಕ್ಲೋರೋಪೈರಿಫಾಸ್ 50 ಇಸಿ 1 ಮಿ.ಲೀ. ರಾಸಾಯನಿಕ ಸಂಪರಣೆ ಮಾಡಬೇಕು.

ADVERTISEMENT

ಮರುಭೂಮಿ ಮಿಡತೆಯನ್ನು ಸಣ್ಣ ಕೊಂಬಿನ ಮಿಡತೆಯೆಂದು ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ವಿನಾಶಕಾರಕ ಕೀಟಗಳಲ್ಲೊಂದಾಗಿದೆ. ಇದು ಸರ್ವಭಕ್ಷಕ ಕೀಟವಾಗಿದ್ದು, ಬೆಳೆ, ಹುಲ್ಲು, ಮರ ಹಾಗೂ ಇನ್ನಿತರ ಹಸಿರನ್ನು ಸಂಪೂರ್ಣವಾಗಿ ತಿಂದು ನಾಶಮಾಡುತ್ತದೆ. ಒಂದು ಮಿಡತೆ ಗುಂಪು ಒಂದು ದಿನಕ್ಕೆ ಸುಮಾರು 150 ಕಿ.ಮಿ. ವರೆಗೆ ಸಂಚರಿಸಬಲ್ಲದು. ಪ್ರಮುಖವಾಗಿ ಗಾಳಿಯ ದಿಕ್ಕನ್ನೆ ಅವಲಂಬಿಸಿ ಮುನ್ನುಗುವ ಈ ಕೀಟ ಹಾದಿಯಲ್ಲಿ ದೊರಕುವ ಎಲ್ಲಾ ಹಸಿರು ಬೆಳೆಯನ್ನು ಬಿಡದೆ ತಿನ್ನುತ್ತದೆ. ಈಗ ದಾಳಿ ಮಾಡಿರುವ ಮಿಡತೆ, ಆಫ್ರಿಕಾ ಖಂಡದಲ್ಲಿ ವೃದ್ಧಿಗೊಂಡು, ಇರಾನ್, ಇರಾಕ್, ಸೌದಿ ಅರೇಬಿಯಾ, ಬಲೂಚಿಸ್ತಾನ ಹಾಗೂ ಪಾಕಿಸ್ತಾನದ ಮೂಲಕ ಭಾರತವನ್ನು ಏಪ್ರಿಲ್ ತಿಂಗಳಿನಲ್ಲಿ ಪ್ರವೇಶಿಸಿವೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಗುಜರಾತಿನಲ್ಲಿ 25 ಸಾವಿರ ಹೆಕ್ಟೇರ್ಜಮೀನಲ್ಲಿರುವ ಬೆಳೆಯನ್ನು ನಾಶ ಮಾಡಿದ್ದು ವರದಿಯಾಗಿದೆ. ಆದರೆ ಇತ್ತೀಚಿಗೆ ಕಾಣಿಸಿಕೊಂಡ ಮತ್ತೊಂದು ಹಿಂಡು ಉತ್ತರ ಮತ್ತು ಪಶ್ಚಿಮದ ರಾಜ್ಯಗಳನ್ನು ಆಕ್ರಮಿಸಿ ಮಧ್ಯೆ ಮತ್ತು ದಕ್ಷಿಣ ಭಾಗದೆಡೆಗೆ ಮುನ್ನುಗ್ಗುತಿದೆ. ಈಗಾಗಲೇ ಈ ಕೀಟವು ಮಹಾರಾಷ್ಟ್ರದ ನಾಗಪುರ ಪ್ರದೇಶದಲ್ಲಿ ಕಂಡು ಬಂದಿರುತ್ತದೆ. ಮಿಡತೆಯ ಚಲನೆ ಗಾಳಿಯ ದಿಕ್ಕು ಮತ್ತು ವೇಗದ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ವರದಿ ಪ್ರಕಾರ ಮಿಡತೆಯ ಎರಡು ದಂಡುಗಳಾಗಿ ವಿಂಗಡಣೆಗೊಂಡು ತೆಲಂಗಾಣದ ಅದಿಲಾಬಾದ್ ಮತ್ತು ಛತ್ತೀಸ್‌ಗಢ್ ಪ್ರವೇಶಿಸಿರುವುದು ಕಂಡುಬಂದಿದೆ. ಕರ್ನಾಟಕ ಪ್ರವೇಶಿಸುವ ಸಾಧ್ಯತೆ ವಿರಳವಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.