ADVERTISEMENT

ರಾಯಚೂರು: ಸಂಭ್ರಮದ ರಾಯರ ವರ್ಧಂತಿ ಉತ್ಸವ

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರಿಂದ ವಿವಿಧ ಕಾಣಿಕೆಗಳ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 3:22 IST
Last Updated 10 ಮಾರ್ಚ್ 2022, 3:22 IST
ಮಂತ್ರಾಲಯದಲ್ಲಿ ನಡೆದ ಗುರು ವೈಭವೋತ್ಸವದ ಕೊನೆಯ ದಿನ ಬುಧವಾರ ಜರುಗಿದ ರಾಯರ 427ನೇ ವರ್ಧಂತಿ ಉತ್ಸವದಲ್ಲಿ ಬೆಂಗಳೂರಿನ ಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ ₹ 50 ಲಕ್ಷ ಮೊತ್ತದ ನವರತ್ನ ಹಾರವನ್ನು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಭಕ್ತರಿಗೆ ತೋರಿಸಿ ರಾಯರ ಸನ್ನಿಧಿಗೆ ಸಮರ್ಪಿಸಿದರು
ಮಂತ್ರಾಲಯದಲ್ಲಿ ನಡೆದ ಗುರು ವೈಭವೋತ್ಸವದ ಕೊನೆಯ ದಿನ ಬುಧವಾರ ಜರುಗಿದ ರಾಯರ 427ನೇ ವರ್ಧಂತಿ ಉತ್ಸವದಲ್ಲಿ ಬೆಂಗಳೂರಿನ ಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ ₹ 50 ಲಕ್ಷ ಮೊತ್ತದ ನವರತ್ನ ಹಾರವನ್ನು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಭಕ್ತರಿಗೆ ತೋರಿಸಿ ರಾಯರ ಸನ್ನಿಧಿಗೆ ಸಮರ್ಪಿಸಿದರು   

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಗುರು ವೈಭವೋತ್ಸವದ ಕೊನೆಯ ದಿನವಾದ ಬುಧವಾರ 427ನೇ ವರ್ಧಂತಿ ಉತ್ಸವವು ಸಂಭ್ರಮ, ಸಡಗರದಿಂದ ನಡೆಯಿತು.

ಪ್ರತಿವರ್ಷದಂತೆ ಬೆಳಿಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ಅಲ್ಲಿನ ಆಡಳಿತಾಧಿಕಾರಿಗಳು ತಂದಿದ್ದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಮೆರವಣಿಗೆ ಮೂಲಕ ಮಠಕ್ಕೆ ತಲುಪಿಸಿದರು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶೇಷವಸ್ತ್ರದ ಹರಿವಾಣವನ್ನು ತಲೆಯ ಮೇಲಿಟ್ಟುಕೊಂಡು ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಿದರು.

ಮಠದ ಪ್ರಾಕಾರದಲ್ಲಿ ವರ್ಧಂತಿ ಉತ್ಸವದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಆನಂತರ ಅನುಗ್ರಹ ಸಂದೇಶ ನೀಡಿದ ಮಠದ ಶ್ರೀಗಳು, ’ಶ್ರೀಗುರು ಸಾರ್ವಭೌಮರ ಆಶೀರ್ವದದೊಂದಿಗೆ ಶ್ರೀಮಠದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಜನರ ನೆರವಿಗೆ ಮಠವು ನಿಂತಿದೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ಅಲ್ಲದೇ ತಿರುಪತಿಯ ಶ್ರೀನಿವಾಸದೇವರಿಗೆ ಮಂತ್ರಾಲಯದ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಹೊಂದಿದೆ. ಪ್ರತಿವರ್ಷವೂ ಶ್ರೀರಾಘವೇಂದ್ರ ಸ್ವಾಮಿಗಳ
ವರ್ಧಂತಿ ಉತ್ಸವದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀನಿವಾಸದ ದೇವರ ಶೇಷವಸ್ತ್ರಗಳ ಪ್ರಸಾದ ರೂಪದಲ್ಲಿ ಬರುತ್ತದೆ‘ ಎಂದು ತಿಳಿಸಿದರು.

ADVERTISEMENT

ಮಠದ ಭಕ್ತರಾದ ಬೆಂಗಳೂರಿನ ರಾಮಕೃಷ್ಣ, ಕವಿತಾ ದಂಪತಿಯು ₹ 50 ಲಕ್ಷ ಮೌಲ್ಯದ ನವರತ್ನ ಹಾರವನ್ನು ಮೂಲರಾಮದೇವರಿಗೆ ಹಾಗೂ ಶ್ರೀರಾಯರಿಗೆ ಸಮರ್ಪಣೆ ಮಾಡಿದರು.

ಶ್ರೀರಾಯರ ಭಕ್ತರಿಂದ ದೇಣಿಗೆ ರೂಪದಲ್ಲಿ ಸುಮಾರು 100 ಕೆಜಿ ತೂಕದ ಅಭಿಷೇಕ ಪಾತ್ರೆ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಸಮರ್ಪಣೆ ಮಾಡಲಾಯಿತು.

ಸುವರ್ಣ ರಥದಲ್ಲಿ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಚಂಡಿವಾದ್ಯಗಳ ಮೂಲಕ ರಥೋತ್ಸವ ನಡೆಸಲಾಯಿತು.

ವರ್ಧಂತಿ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಮಠದ ಪೀಠಾಧಿಪತಿಗಳು ಮೂಲರಾಮದೇವರ ಪೂಜೆ ನೆರವೇರಿಸಿದರು.

ವಿಶೇಷ ಉಪನ್ಯಾಸ, ಅನ್ನಪ್ರಸಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಾದಹಾರ: ವರ್ಧಂತಿ ಉತ್ಸವದ ನಿಮಿತ್ತ ಚೆನ್ನೈನ ಶ್ರೀರಾಘವೇಂದ್ರ ನಾದಹಾರ ಕಲಾ ಟ್ರಸ್ಟ್‌ ಸದಸ್ಯರು ಮಠದ ಪ್ರಕಾರಾದಲ್ಲಿ ಬುಧವಾರ 'ನಾದಹಾರ' ಸಂಗೀತ ಸೇವೆ ಸಮರ್ಪಿಸಿದರು.

150 ಕಲಾವಿದರು ಏಕಕಾಲಕ್ಕೆ ವಾದ್ಯ ನುಡಿಸಿದರು. ಕಳೆದ 18 ವರ್ಷಗಳಿಂದ ಅವಿರತವಾಗಿ ಪ್ರತಿವರ್ಷ ವರ್ಧಂತಿಯಂದು ನಾದಹಾರ ಸಮರ್ಪಣೆ ಸೇವೆ ನಡೆದುಕೊಂಡು ಬಂದಿದೆ.

ಶ್ರೀರಾಘವೇಂದ್ರ ಸ್ವಾಮಿಗಳ ಜನ್ಮಸ್ಥಳ ತಮಿಳುನಾಡಿನ ಶ್ರೀಕುಂಭಕೋಣಂನಿಂದಲೂ ಅನೇಕ ಕಲಾವಿದರು ಭಾಗವಹಿಸಿದ್ದರು.

'ನಾದಹಾರ ಟ್ರಸ್ಟ್ ಸದಸ್ಯರು ಸಂಗೀತ ಸೇವೆ ಜೊತೆಗೆ ಒಟ್ಟಾಗಿ ಪ್ರತಿವರ್ಷ ಮಠಕ್ಕೆ ವಿಶೇಷ ಕಾಣಿಕೆಯನ್ನು ಸಮರ್ಪಣೆ ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಮಠದ ಗೋ ಶಾಲೆ ನಿರ್ವಹಣೆಗೆ ನೆರವು ಒದಗಿಸಲಾಗಿದೆ' ಎಂದು ಟ್ರಸ್ಟ್ ಸದಸ್ಯ ಪ್ರಶಾಂತ ಅಯ್ಯಂಗಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.