ADVERTISEMENT

ಗುರುದೇವ ಪ್ಲಾಟ್ ಸೇಲ್‌ನಿಂದ ಜನರಿಗೆ ಮೋಸ: ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 12:39 IST
Last Updated 16 ಅಕ್ಟೋಬರ್ 2019, 12:39 IST

ರಾಯಚೂರು: ಗುರುದೇವ ಪ್ಲಾಟ್ ಸೇಲ್ ಪ್ರೈ.ಲಿ. ಕಂಪೆನಿಯಿಂದ ಕಾನೂನು ಉಲ್ಲಂಘಿಸಿ ನಿವೇಶನಗಳನ್ನು ಮಾರಾಟ ಮಾಡಲು ‘ಸ್ಕೀಮ್’ ಹೆಸರಿನಲ್ಲಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಮೋಸ ಮಾಡಲಾಗುತ್ತಿದೆಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜುಪಟ್ಟಿ ಹಾಗೂ ಅಂಬೇಡ್ಕರ್ ಸೇನೆಯ ಜಿಲ್ಲಾ ಅಧ್ಯಕ್ಷ ವಿಶ್ವನಾಥಪಟ್ಟಿ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪೆನಿಯ ನಿರ್ದೇಶಕ ಸುರೇಶಕುಮಾರ ರಾಜಸ್ತಾನದವರು. ರಾಜ್ಯದಲ್ಲಿ ಯಾವುದೇ ದಾಖಲಾತಿಗಳಿಲ್ಲ. ಆದರೂ, ಕಂಪೆನಿಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಸ್ನೇಹಿತರು ಹಾಗೂ ಸಂಬಂಧಿಕರಿಗೆ ಮಾತ್ರ ಸ್ಕೀಮ್‌ ಎಂದು ನಮೂದಿಸಿ ಶೇ 90 ರಷ್ಟು ಹೊರಗಿನವರಿಗೆ ಸದಸ್ಯತ್ವ ನೀಡಿ ಹಣ ಲಪಟಾಯಿಸಿದ್ದಾರೆ. ಕೂಡಲೇಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಿ ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಬೇಕು ಎಂದು ಹೇಳಿದರು.

ಕಂಪೆನಿಯ ಅಂತರ್ಜಾಲ ತಾಣದಲ್ಲಿ ರಿಯಲ್ ಎಸ್ಟೇಟ್‌ ಉದ್ದಿಮೆ ಎಂದು ಉಲ್ಲೇಖಿಸಿದ್ದು, ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಪಡೆದಿಲ್ಲ. ಕೃಷಿ ಹೆಸರಿನಲ್ಲಿ ಜಮೀನು ಪಡೆದುಕೊಂಡು ಭೂ ಪರಿವರ್ತನೆಯೂ ಮಾಡಿಕೊಳ್ಳದೇ ಬಡಾವಣೆಯ ನಕಾಶೆ ತೋರಿಸಿ ವಂಚನೆ ಮಾಡುತ್ತಿದ್ದಾರೆ ಎಂದರು.

ADVERTISEMENT

ಮಿಟ್ಟಿಮಲ್ಕಾಪುರದ ಬಡಾವಣೆಯಲ್ಲಿ ನಿವೇಶನ ನೀಡುವುದಾಗಿ ವಾಗ್ದಾನ ಮಾಡಿ ಮೂರು ವರ್ಷಗಳು ಕಳೆದಿವೆ. ಸ್ಕೀಮ್ ಮುಗಿದರೂ ನಿವೇಶನ ನೀಡಿಲ್ಲ. ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಹಲವು ನಿಮಯಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಹೇಶಕುಮಾರ, ವಿಜಯಕುಮಾರ, ಬಾಲಮುನಿ, ಬದ್ರಿನಾಥ, ನಲ್ಲಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.