ADVERTISEMENT

ಸಮಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ

ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ನಗರಸಭೆ ಉಪಾಧ್ಯಕ್ಷ ಜಯಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 12:40 IST
Last Updated 27 ಜುಲೈ 2018, 12:40 IST
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿದರು   

ರಾಯಚೂರು: ಜಗಜ್ಯೋತಿ ಬಸವಣ್ಣನವರ ಸಮಕಾಲಿನರಾದ ಹಡಪದ ಅಪ್ಪಣ್ಣ ಅವರು ಸಮಸಮಾಜ ನಿರ್ಮಿಸಲು ಹಾಗೂ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದ ಶರಣರ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಿದ್ದು, ಅದನ್ನು ಈಗಿನ ಪ್ರಜಾಪ್ರಭುತ್ವದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಸುಸಂಸ್ಕೃತಿ ಸಮಾಜ ನಿರ್ಮಾಣದಲ್ಲಿ ಪ್ರತಿಯೊಂದು ಸಮಾಜಕ್ಕೂ ತನ್ನದೇ ಮಹತ್ವವಿದ್ದು, ಜಾತಿ ಹಾಗೂ ಸಮಾಜ ಕೀಳೆಂದು ಭಾವಿಸದೇ ಕುಲ ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸಿ, ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಬೇಕು ಎಂದರು.

ಆಯಾ ಜಾತಿಯ ಗುರುಗಳ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಒತ್ತಾಯ ಮಾಡುತ್ತಿರುವುದು ಕಾಣುತ್ತಿದ್ದು, ಕೆಲ ಜಯಂತಿಗಳು ಕಾಟಾಚಾರಕ್ಕೆ ಎಂಬಂತೆ ಆಚರಣೆ ಮಾಡಲಾಗುತ್ತದೆ. ಆದರೆ, ಹಡಪದ ಸಮಾಜ ಕ್ರಿಯಾಶೀಲತೆಯಿಂದ ಪಾಲ್ಗೊಂಡು ಜಯಂತಿ ಆಚರಣೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಚ್.ಸುರೇಶ ಬಳಗಾನೂರು ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣ ಜಯಂತಿಯನ್ನು ಸರ್ಕಾರದಿಂದ ಮೊದಲಬಾರಿಗೆ ಆಚರಣೆ ಮಾಡುತ್ತಿದ್ದು, ಇದು 884ನೇ ಜಯಂತಿಯಾಗಿದೆ ಎಂದು ಹೇಳಿದರು.

ಕಲ್ಯಾಣದಲ್ಲಿ ಏನೇ ಕಾರ್ಯಕ್ರಮ ನಡೆಯಬೇಕಾದರೂ ಬಸವಣ್ಣವರು ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರ ಸಹಾಯ ತೆಗೆದುಕೊಳ್ಳುತ್ತಿದ್ದರು. ಅಂತಹವರ ಜಯಂತಿ ಆಚರಣೆ ಮಾಡುತ್ತಿರುವ ಸರ್ಕಾರಕ್ಕೆ ಅಭಾರಿಯಾಗಿದ್ದೇವೆ ಎಂದರು.

ರಾಜ್ಯದಲ್ಲಿ ಸುಮಾರು 28 ಲಕ್ಷದಷ್ಟು ಜನಾಂಗದವರಿದ್ದು, ಎಲ್ಲರನ್ನೂ ಒಗ್ಗೂಡಿಸಿ ಸಮಾಜಕ್ಕೆ ಬೇಕಾಗುವ ಸೌಲಭ್ಯಗಳನ್ನು ಪಡೆಯಬೇಕಾಗಿದೆ. ಅಪ್ಪಣ್ಣನವರು ರಚಿಸಿರುವ 1000 ವಚನಗಳಲ್ಲಿ, 250 ವಚನಗಳು ಮಾತ್ರ ಲಭ್ಯವಾಗಿವೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಪ್ರಾಸ್ತಾವಿಕ ಮಾತನಾಡಿ, ಜಯಂತಿಯನ್ನು ಆಚರಣೆ ಮಾಡುವ ಮೂಲಕ ತತ್ವಪುರುಷರ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಮಾಜದ ಮುಖಂಡರದಾದ ಅಮರಪ್ಪ ಹಡಪದ, ಮಹಾಬಲೇಶ, ವೀರಭದ್ರಪ್ಪ, ದೇವೇಂದ್ರಪ್ಪ, ಬಸವಂತರಾಯ, ವಾರ್ತಾ ಇಲಾಖೆ ವಾರ್ತಾ ಸಹಾಯಕ ಸುರೇಶ, ದಂಡಪ್ಪ ಬಿರಾದಾರ್, ಬಸವರಾಜ, ಸಂಗಪ್ಪ ಹಡಪದ, ಅಯ್ಯಪ್ಪ ದೊಂಡಂಬಳಿ, ಗುಂಡಪ್ಪ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.