
ಮುದಗಲ್: ಸಮೀಪದ ಹನಮನಗುಡ್ಡ (ಹೊಸೂರು) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಬದುಕು ಅತಂತ್ರದಲ್ಲಿದೆ.
ಶಾಲೆಯಲ್ಲಿ 195 ವಿದ್ಯಾರ್ಥಿಗಳು ಓದುತ್ತಾರೆ. ಗ್ರಾಮದ ಮಧ್ಯದಲ್ಲಿರುವ ನಾಲ್ಕು ಕೊಠಡಿಗಳ ಕಟ್ಟಡದಲ್ಲಿ 1ರಿಂದ 5ನೇ ತರಗತಿಯ ಮಕ್ಕಳಿಗೆ ತರಗತಿಗಳು ನಡೆಯುತ್ತಿವೆ. 6ರಿಂದ 8 ನೇ ತರಗತಿವರಗೆ ಗ್ರಾಮದ ವಾಯುವ್ಯ ದಿಕ್ಕಿನಲ್ಲಿರುವ 6 ಕೊಠಡಿಗಳಲ್ಲಿ ತರಗತಿ ನಡೆಯುತ್ತಿದ್ದು, 6 ಕೊಠಡಿಗಳು ದುರಸ್ತಿ ಹಂತದಲ್ಲಿವೆ.
ಕೊಠಡಿಗಳ ಮೇಲ್ಚಾವಣಿಯ ಸಿಮೆಂಟ್ ಉದುರುತ್ತಿದೆ. ಕಬ್ಬಿಣದ ಕಂಬಿಗಳು ಕಾಣುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಶಾಲೆಯ ಕುಂಬಿ ಹಾಳಾಗಿದೆ. ತರಗತಿ ನಡೆಸಲು ಕಟ್ಟಡ ಯೋಗ್ಯವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಎಂಜಿನಿಯರ್ ಹೇಳಿದ್ದರೂ ಇಲಾಖೆ ಅದೇ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿದೆ.
ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ಆಗ ಕೊಠಡಿಗಳ ಒಳ ಪ್ರವೇಶ ಮಾಡದಂತೆ ಕಂಬಳಿಗೆ ಹಗ್ಗ ಕಟ್ಟುತ್ತಾರೆ. ವಿದ್ಯಾರ್ಥಿಗಳು ಬಯಲಿನಲ್ಲಿಯೇ ಕುಳಿತು ಓದಬೇಕಾಗಿದೆ. ಆಗ ತೊಂದರೆಯಾಗಿ ಅಭ್ಯಾಸಕ್ಕೆ ಹಿನ್ನಡೆಯಾಗುತ್ತದೆ.
ಶಾಲೆಯಲ್ಲಿ ಶೌಚಾಲಯ ಇಲ್ಲ. ಶೌಚಾಲಯಕ್ಕಾಗಿ ವಿದ್ಯಾರ್ಥಿಗಳು ಪರದಾಡುತ್ತಾರೆ. ಬಾಲಕರು ಹೊರಗಡೆ ಹೋಗಿ ಬಯಲಿನಲ್ಲಿ ಶೌಚ ಮಾಡಿ ಬರುತ್ತಾರೆ. ಬಾಲಕಿಯರು ಹೊರಗಡೆ ಹೋಗಿ ಶೌಚ ಮಾಡಲು ಮುಜುಗರ ಪಡುತ್ತಿದ್ದಾರೆ. ಶೌಚಾಲಯ ನಿರ್ಮಾಣ ಮಾಡಲು ಶಾಲಾ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಮುಂದೆ ಬರುತ್ತಿಲ್ಲ.
ಅರ್ಧ ತಡೆಗೋಡೆ ನಿರ್ಮಾಣವಾಗಿದೆ. ನಿರ್ಮಿಸಿದ ತಡೆಗೋಡೆ ಕೆಲ ಕಡೆ ಬಿದ್ದಿದೆ. ಆದರೂ ದುರಸ್ತಿ ಗೋಜಿಗೆ ಹೋಗಿಲ್ಲ. ಪೂರ್ಣ ಪ್ರಮಾಣದ ತಡೆಗೋಡೆ ಇಲ್ಲದ್ದರಿಂದ ಆಗಾಗ ಜಾನುವಾರಗಳು ಶಾಲೆ ಮೈದಾನಕ್ಕೆ ಬಂದು ಹೋಗುತ್ತಿವೆ.
20 ವರ್ಷಗಳಿಂದ ಎಸ್‌ಡಿಎಂಸಿ ಮಾಡಿಲ್ಲ. ಮಾಡಿದರೆ ರಾಜಕೀಯ ಹುಟ್ಟಿಕೊಳ್ಳುತ್ತದೆ. ಶಾಲೆಯಲ್ಲಿ ರಾಜಕೀಯ ಪ್ರವೇಶ ಮಾಡಿದರೆ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಅಭ್ಯಾಸ ಕುಂಠಿತಗೊಳ್ಳುತ್ತದೆ ಎಂದು ಗ್ರಾಮಸ್ಥರೇ ಎಸ್‌ಡಿಎಂಸಿ ರಚನೆ ಮಾಡಬೇಡಿ ಎಂದು ಪಟ್ಟುಹಿಡಿದಿದ್ದಾರೆ ಎಂದು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಮಲ್ಲಣ್ಣ ಹೇಳಿದರು.
ಮೂರು ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲು ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆಶ್ರೀಕಾಂತ ಪ್ರಭಾರ ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.