
ಸಿಂಧನೂರು: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ರಾಜ್ಯ ಸರ್ಕಾರ ಅಂಗೀಕರಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2025ವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ನಗರ ಮತ್ತು ಗ್ರಾಮೀಣ ಮಂಡಲ ನೇತೃತ್ವದಲ್ಲಿ ಬುಧವಾರ ಸ್ಥಳೀಯ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮಾರ್ಗವಾಗಿ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ ‘ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ವಿಧೇಯಕ ಭಾರತದ ಸಂವಿಧಾನಕ್ಕೆ ವಿರುದ್ಧವಿದೆ. ಇದು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ಇದರಡಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಜಾಮೀನು ಇಲ್ಲ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶ ಪಡಿಸುವ ಇಂತಹ ಕಾಯ್ದೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು’ ಎಂದು ಒತ್ತಾಯಿಸಿದರು.
ಶಿರಸ್ತೇದಾರ್ ಅಂಬಾದಾಸ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಮುಖಂಡರಾದ ಅಮರೇಶ ರೈತನಗರ ಕ್ಯಾಂಪ್, ಪರಮೇಶಪ್ಪ ಹಾದಿಮನಿ, ಲಿಂಗರಾಜ ಹೂಗಾರ, ವೆಂಕಟೇಶ ಬಾದರ್ಲಿ, ಸೋಮನಾಥ ಪತ್ತಾರ, ರವಿ ರಾಠೋಡ್, ಮುತ್ತು ಬರ್ಸಿ, ಮಲ್ಲಿಕಾರ್ಜುನರೆಡ್ಡಿ ಸಾಸಲಮರಿ, ಫಕೀರಪ್ಪ ಬಾಗೋಡಿ, ನಾಗರಾಜ ದೇವರಗುಡಿ, ಕಾಶೀನಾಥ, ಕೃಷ್ಣ ರಾಠೋಡ್, ಮಲ್ಲಿಕಾರ್ಜುನ ಕಾಟಗಲ್, ರವಿ ಈಡಿಗ, ವೆಂಕಟೇಶ ಬಾದರ್ಲಿ, ರಾಮಕೃಷ್ಣ ಉಪ್ಪಾರ, ಹುಚ್ಚಪ್ಪ ದೇವರಮನಿ, ಸೂಗಯ್ಯಸ್ವಾಮಿ, ರಾಮದಾಸ ಸಾಲಗುಂದಾ, ಮಲ್ಲಿಕಾರ್ಜುನ ರಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.