ADVERTISEMENT

ಹಟ್ಟಿ: 1,724 ಕೆ.ಜಿ.ಚಿನ್ನ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:43 IST
Last Updated 2 ಜೂನ್ 2020, 16:43 IST
ಹಟ್ಟಿಚಿನ್ನದಗಣಿ ಕಂಪನಿಯ ಆಡಳಿತ ಕಚೇರಿಯ ಹೊರ ನೋಟ
ಹಟ್ಟಿಚಿನ್ನದಗಣಿ ಕಂಪನಿಯ ಆಡಳಿತ ಕಚೇರಿಯ ಹೊರ ನೋಟ   

ಹಟ್ಟಿ ಚಿನ್ನದ ಗಣಿ: ಇಲ್ಲಿನ ಚಿನ್ನದಗಣಿ ಕಂಪನಿಯು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 6.38 ಲಕ್ಷ ಮೆಟ್ರಿಕ್‌ ಟನ್‌ ಚಿನ್ನದ ಅದಿರು ಹೊರತೆಗೆದು 1,724 ಕೆ.ಜಿ. ಚಿನ್ನ ಉತ್ಪಾದನೆ ಮಾಡಿದೆ.

ಕಳೆದ ಆರ್ಥಿಕ ವರ್ಷಕ್ಕಿಂತ ಈ ಬಾರಿ 63 ಕೆ.ಜಿ. ಚಿನ್ನ ಹೆಚ್ಚು ಉತ್ಪಾದನೆ ಆಗಿದೆ. 2018-19ನೇ ಸಾಲಿನಲ್ಲಿ 5.87 ಲಕ್ಷ ಮೆಟ್ರಿಕ್ ಟನ್ ಚಿನ್ನದ ಅದಿರು ಹೊರತೆಗೆದು 1,661 ಕೆ.ಜಿ ಚಿನ್ನ ಉತ್ಪಾದನೆ
ಮಾಡಲಾಗಿತ್ತು.

2019-20ನೇ ಸಾಲಿನ ಮಾರ್ಚ್‌ ತಿಂಗಳಲ್ಲಿ ಎಂಟು ದಿನ ಲಾಕ್‌ಡೌನ್‌ ಪರಿಣಾಮ ಉತ್ಪಾದನೆ ಸ್ಥಗಿತವಾದರೂ ಅಧಿಕ ಚಿನ್ನದ ಅದಿರು ಹಾಗೂ ಚಿನ್ನ ಉತ್ಪಾದಿಸಲಾಗಿದೆ.

ADVERTISEMENT

ಮರಳು ಮಾರಾಟದ ಹೊಣೆ ಗಣಿ ಕಂಪನಿಗೆ: ರಾಜ್ಯ ಸರ್ಕಾರವು ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಗೆ ಮರಳು ಮಾರಾಟದ ಹಕ್ಕನ್ನು ನೀಡಿದೆ. ಬೆಳಗಾವಿ, ವಿಜಯಪುರ ಹಾಗೂ ಕಲುಬುರ್ಗಿ ವಿಭಾಗದ ಜಿಲ್ಲೆಗಳಲ್ಲಿ ಹರಾಜು ಮೂಲಕ ಮರಳು ಮಾರಾಟದ ಹೊಣೆಯನ್ನು ಗಣಿ ಕಂಪನಿಗೆ ನೀಡಿ ರಾಜ್ಯ ಸರ್ಕಾರ ಈಚೆಗೆ ಆದೇಶ
ನೀಡಿದೆ.

2019-20ನೇ ಸಾಲಿನಲ್ಲಿ ಕಾರ್ಮಿಕರು, ಅಧಿಕಾರಿಗಳ ಶ್ರಮದಿಂದ ಅಧಿಕ ಚಿನ್ನ ಉತ್ಪಾದಿಸಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಪರಿಣಾಮ ಉತ್ಪಾದನೆ ಒಂದು ತಿಂಗಳವರೆಗೆ ಸ್ಥಗಿತವಾಗಿತ್ತು. ಕಳೆದ ಒಂದು ತಿಂಗಳಿಂದ ಶೇ 30 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮಾಡಲಾಗುತ್ತಿದೆ. ತಿಂಗಳಿಗೆ 75 ಕೆ.ಜಿ.ಯಷ್ಟು ಚಿನ್ನ ಉತ್ಪಾದಿಸಲಾಗುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.