ಹಟ್ಟಿ ಚಿನ್ನದಗಣಿ: ದೇಶದ ಏಕೈಕ ಚಿನ್ನದ ಗಣಿ ಇರುವ ಹಟ್ಟಿ ಪಟ್ಟಣದಲ್ಲಿ ರಾತ್ರಿ ಸಮಯದಲ್ಲಿ ಸಾರ್ವಜನಿಕರು, ಕಾರ್ಮಿಕರು ಕತ್ತಲಲ್ಲಿ ತಿರುಗಾಡಬೇಕಾದ ಪರಿಸ್ದಿತಿ ಇದೆ.
ಹಟ್ಟಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ, ದೀಪಗಳನ್ನು ಹಾಕಿದರೂ ನಿರ್ವಹಣೆ ಮಾಡದೇ ಕತ್ತಲು ಆವರಿಸಿದೆ.
ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ ₹50ಲಕ್ಷದ ವೆಚ್ಚದಲ್ಲಿ 2020 ರಲ್ಲಿ ಟೆಂಡರ್ ಕರೆದು ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಅಂದಿನಿಂದ ಇಂದಿನವರೆಗೂ ಬೀದಿ ದೀಪಗಳು ಉರಿಯಿತ್ತಿಲ್ಲ ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ವಿದ್ಯುತ್ ಕಂಬಗಳನ್ನು ಗಣಿ ಕಂಪನಿ ಆಡಳಿತ ನಿರ್ವಹಣೆ ಮಾಡಬೇಕು. ಆದರೆ ಇದರ ನಿರ್ವಹಣೆಯನ್ನೇ ಕಂಪೆನಿ ಮರೆತು ಬಿಟ್ಟಿದೆ. ಕ್ಯಾಂಪ್ ಪ್ರದೇಶದಲ್ಲಿ ಹಾದು ಹೋಗುವ ಮುಖ್ಯರಸ್ತೆ, ಲಿಂಗವಧೂತ ದೇವಸ್ಧಾನ ಮುಖ್ಯರಸ್ತೆ ಪಕ್ಕದಲ್ಲಿ ಹಾಕಿದ ಕಂಬಗಳಲ್ಲಿ ದೀಪಗಳೇ ಇಲ್ಲವಾಗಿದೆ.
ಈ ಸಮಸ್ಯೆ ಬಗ್ಗೆ ಅಧಿಚೂಚಿತ ಪ್ರದೇಶ ಸಮಿತಿ, ಮುಖ್ಯಾಧಿಕಾರಿ ಗಮನಕ್ಕೆ ತರಲಾಗಿದ್ದು ಯಾವುದೆ ಕ್ರಮ ಕೈಗೊಂಡಿಲ್ಲ. ಅಧಿಸೂಚಿತ ಪ್ರದೇಶ ಸಮಿತಿ ಅಧಿಕಾರಿಗಳನ್ನು ವಿಚಾರಿಸಿದರೆ, ವಿದ್ಯುತ್ ಕಂಬಗಳ ನಿರ್ವಹಣೆಯನ್ನು ಗಣಿ ಕಂಪನಿ ಆಡಳಿತವೇ ಮಾಡಬೇಕು ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಬೀದಿ ದೀಪವನ್ನು ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡುತ್ತಿದ್ದಾರೆ. ಬೀದಿ ದೀಪಗಳ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯವೀನೋದ ಕುಮಾರ ಹಿಂದೂ ದಲಿತ ಹೋರಾಟ ಸಮಿತಿ ಹಟ್ಟಿ ಘಟಕದ ಅಧ್ಯಕ್ಷ
ಬೀದಿ ದೀಪಗಳ ದುರಸ್ತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಂಡು ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದುಯಮನೂರಪ್ಪ ಹಿರಿಯ ವ್ಯವಸ್ಧಾಪಕ ಹಟ್ಟಿ ಚಿನ್ನದ ಗಣಿಕಂಪನಿ
ಬೀದಿ ದೀಪಗಳ ನಿರ್ವಹಣೆಯನ್ನು ಗಣಿ ಕಂಪನಿ ಆಡಳಿತ ಮಾಡಬೇಕಿದೆ. ದುರಸ್ತಿ ಮಾಡಿ ಎಂದು ಗಣಿ ಕಂಪನಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆಜಗನಾಥ ಅಧಿಸೂಚಿತ ಪ್ರದೇಶ ಸಮಿತಿ ಮುಖ್ಯಾಧಿಕಾರಿ ಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.