
ಹಟ್ಟಿ ಚಿನ್ನದ ಗಣಿ: ಇಲ್ಲಿನ ಚಿನ್ನದ ಗಣಿ ಕಂಪನಿಯ ಹಿರಿಯ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಒದಗಿಸುವ ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿಯಾಗದಿರುವುದು ಕಾರ್ಮಿಕರನ್ನು ಆತಂಕಕ್ಕೆ ದೂಡಿದೆ.
ಹಲವು ವರ್ಷಗಳಿಂದ ಗಣಿಯಲ್ಲಿ ಸೇವೆ ಸಲ್ಲಿಸಿದ ವಯಸ್ಸಾದ ಗಣಿ ಕಾರ್ಮಿಕರನ್ನು ಮೆಡಿಕಲ್ ಅನ್‌ಫಿಟ್ ಯೋಜನೆ ಅಡಿಯಲ್ಲಿ ಅನರ್ಹಗೊಳಿಸಿ, ಅವರ ಕುಟುಂಬದ ಒಬ್ಬರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ.
ಇದನ್ನು 2017ರಲ್ಲಿ ಜಾರಿಗೆ ತರಲಾಯಿತು. ಬಳಿಕ ಸ್ಥಗಿತಗೊಂಡಿತು. ಕೆಲವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆಯಲಿದೆ ಎಂದು ಪತ್ರ ಬರೆದ ಕಾರಣ ಸ್ಥಗಿತಗೊಂಡಿದೆ ಎಂದು ಕಾರ್ಮಿಕರು ತಿಳಿಸುತ್ತಾರೆ.
ಮೊದಲು ಗಣಿ ಕಂಪನಿಯ ನಿರ್ದೇಶಕ ಮಂಡಳಿ ತೀರ್ಮಾನದ ಮೇರೆಗೆ ಯೋಜನೆ ಜಾರಿಯಾಗುತ್ತಿತ್ತು. ಈಗ ಯೋಜನೆ ಜಾರಿಗೆ ಸರ್ಕಾರದ ಸಿ&ಆರ್, ಡಿಪಿಇಆರ್, ಹಣಕಾಸು ಇಲಾಖೆಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ತೊಡಕುಗಳು ಎದುರಾದ ಕಾರಣ ಯೋಜನೆ ಪುನರಾರಂಭಿಸಲು ಕಷ್ಟವಾಗುತ್ತಿದೆ.
ಈ ಹಿಂದೆ ಸಂಘಟನೆಗಳು ಒತ್ತಡ ತಂದಿದ್ದರಿಂದ ಯೋಜನೆ ಜಾರಿಯಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ನೇತೃತ್ವದ ಉಪ ಸಮಿತಿ ರಚಿಸ ಲಾಗಿತ್ತು. ಇದಾದ ನಂತರ ಪಂಕಜಕುಮಾರ ಪಾಂಡೆ ನೇತೃತ್ವದಲ್ಲಿ ಉಪ ಸಮಿತಿಯೊಂದನ್ನು ರಚಿಸಲಾಗಿತ್ತು.
2023ರಲ್ಲಿ ಗಣಿ ಕಂಪನಿಯ ನಿರ್ದೇಶಕ ಮಂಡಳಿ ಸಭೆಯಲ್ಲಿ ಎರಡೂ ಉಪ ಸಮಿತಿಗಳ ವರದಿಗಳ ಕುರಿತು ಚರ್ಚಿಸಿ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗಿತ್ತು.
2023ರ ಡಿಸೆಂಬರ್‌ನಲ್ಲಿ ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿ ಸಂಬಂಧ ಗಣಿ ಆಡಳಿತ ವರ್ಗ ನೋಟಿಸ್ ಸಹ ಪ್ರಕಟಿಸಿತ್ತು. ಯೋಜನೆ ಬಯಸಿದ ಕಾರ್ಮಿಕರು ಅರ್ಜಿ ಸಲ್ಲಿಸಿ, ಬೆಂಗಳೂರಿನ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗಿ ಬಂದಿದ್ದರು.
ಈ ಮಧ್ಯೆ ಹಣಕಾಸು ಇಲಾಖೆಯಿಂದ ಸ್ಪಷ್ಟನೆ ಕೋರಿ ಪತ್ರ ಬಂದ ಕಾರಣ 2024ರ ಜೂನ್ ತಿಂಗಳಿಂದ ಮೆಡಿಕಲ್ ಅನ್‌ಫಿಟ್ ಯೋಜನೆ ಪ್ರಕ್ರಿಯೆ ಸ್ಥಗಿತಗೊಂಡಿತು.
ಸ್ಥಗಿತಗೊಂಡಿರುವ ಯೋಜನೆಯನ್ನು ಪುನರಾರಂಭಿಸಲು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುಕ್ಕಾಣಿ ಹಿಡಿದಿರುವ ಸಿಐಟಿಯು 6 ತಿಂಗಳಿಂದ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಇನ್ನೂ ಜಾರಿಯಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಎರಡೂ ಉಪ ಸಮಿತಿ ರಚನೆ 2023ರಲ್ಲಿ ಯೋಜನೆ ಜಾರಿಗೆ ಒಪ್ಪಿಗೆ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಕಾರ್ಮಿಕರು
ಮೆಡಿಕಲ್ ಅನ್‌ಫಿಟ್ ಯೋಜನೆ ಸರ್ಕಾರದ ಹಂತದಲ್ಲಿದ್ದು ಜಾರಿಗೆ ನಿರಂತರ ಪ್ರಯತ್ನ ನಡೆದಿದೆ. ಬೇಗ ಜಾರಿ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಒತ್ತಡ ತರಲಾಗುವುದುಎಸ್.ಎಂ.ಶಫಿ ಪ್ರಧಾನ ಕಾರ್ಯದರ್ಶಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘ
ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿಗೆ ಅನುಮೋದನೆ ನೀಡಬೇಕು ಎಂದು ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ. ಕೆಲವು ಸಮಸ್ಯೆಗಳು ಎದುರಾಗಿದ್ದು ಈ ಬಗ್ಗೆ ಪರಿಶೀಲಿಸುವಂತೆ ಗಣಿ ಕಂಪನಿ ಅಧಿಕಾರಿಗಳಿಗೆ ಸೂಚಿಸಲಾಗುವುದುಜೆ.ಟಿ.ಪಾಟೀಲ ಅಧ್ಯಕ್ಷ ಹಟ್ಟಿ ಚಿನ್ನದ ಗಣಿ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.