
ಹಟ್ಟಿ ಚಿನ್ನದ ಗಣಿ: ‘ಗಣಿ ಕಂಪನಿ ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಇದನ್ನು ವಿರೋಧಿಸಲು, ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ ಹೇಳಿದರು.
ಹಟ್ಟಿ ಪಟ್ಟಣದ ಕ್ಯಾಂಪ್ ಬಸ್ ನಿಲ್ದಾಣದ ಆವರಣದಲ್ಲಿ ಸಿಐಟಿಯು, ಎಐಟಿಯುಸಿ, ಟಿಯುಸಿಐ, ಆಕಳು ಪಕ್ಷ ಸಹಯೋಗದಲ್ಲಿ ನಡೆದ ಕೇಂದ್ರ ಸರ್ಕಾರದ ನೂತನ ಲೇಬರ್ ಕೋಡ್‌ಗಳನ್ನು ವಿರೋಧಿಸಿ, ರಾಜ್ಯ ಸರ್ಕಾರದ ನೂತನ ಲೇಬರ್ ಕೋಡ್‌ಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರಚಾರಾಂದೋಲನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಪಿಎಲ್‌ಐಬಿ ಹಾಗೂ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ, ಬೋನಸ್ ಪಾವತಿ, ವೈದ್ಯಕೀಯ ವರದಿಯ ಆಧಾರದ ಮೇಲೆ ನಿವೃತ್ತಿ ನೀಡುವ ಯೋಜನೆಯನ್ನು ತಕ್ಷಣ ಜಾರಿಗೆ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕಲಾಗಿದೆ ಎಂದರು.
ಗೈರಾದ ಕಾರ್ಮಿಕರ ಮರು ನೇಮಕಾತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. 25 ವರ್ಷ ಸೇವೆ ಸಲ್ಲಿಸಿದ ಕಾರ್ಮಿಕರಿಗೆ 25 ಗ್ರಾಂ ಬಂಗಾರ ವಿತರಣೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಮಹಾಂತೇಶ ಮಾತನಾಡಿ,‘ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಗಣಿ ಕಂಪನಿಯ ಆಡಳಿತ ಮಂಡಳಿ ಒಪ್ಪದಿದ್ದರೆ ಫೆ.12ರಂದು ಉತ್ಪಾದನೆ ಸ್ಧಗಿತ ಮಾಡಿ ಗಣಿ ಕಂಪನಿ ಬಂದ್ ಮಾಡಲಾಗುವುದು’ ಎಂದರು.
ಗೌರವಾಧ್ಯಕ್ಷ ಮೀನಾಕ್ಷಿ ಸುದರಂ ಮಾತನಾಡಿ,‘ಗಣಿ ಕಂಪನಿಯನ್ನು ಹೊಸ ತಂತ್ರಜ್ಞಾನದ ಮೂಲಕ
ಅಭಿವೃದ್ಧಿ ಮಾಡಿ, ಉತ್ಪಾದನೆ ಹೆಚ್ಚಿಸಲು ಕಾರ್ಮಿಕರು ಬೆಂಬಲ ನೀಡಲಿದ್ದಾರೆ’ ಎಂದು ಹೇಳಿದರು.
ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಾನೂನು ಜಾರಿ ಮಾಡಲು ಮುಂದಾಗಿದ್ದು, ಖಂಡನೀಯ. ಕಾಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ನೀತಿಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ದುಡಿಯುವ ವರ್ಗ ಜಾಗೃತರಾಗಬೇಕಿದೆ ಎಂದರು.
ರಾಘವೇಂದ್ರ ಕುಷ್ಟಗಿ, ಟಿಯುಸಿಐ ಸಂಘದ ರಾಜ್ಯಾಧ್ಯಕ್ಷ ಅಮೀರ್ ಅಲಿ, ನರಸಣ್ಣ ನಾಯಕ, ಶಾಂತಪ್ಪ ಆನ್ವರಿ, ವೆಂಕೋಬ ಮಿಯ್ಯಾಪುರ, ರಮೇಶ, ಕಾರ್ಮಿಕ ಮುಖಂಡರಾದ ಮೌನುದ್ದೀನ್, ಸಿದ್ದಪ್ಪ ಮುಂಡರಗಿ, ಸೋಮಣ್ಣ ನಾಯಕ, ಗುಂಡಪ್ಪ ಗೌಡ, ದುರುಗಪ್ಪ, ಹನುಮಂತ, ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.