ADVERTISEMENT

ಉತ್ತಮ ಪ್ರಜೆ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು: ಇಬ್ರಾಹಿಂ ಸುತಾರ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲ್ಲೂಕು ಘಟಕದಿಂದ ಶೈಕ್ಷಣಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 12:20 IST
Last Updated 23 ಜನವರಿ 2020, 12:20 IST
ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲ್ಲೂಕು ಘಟಕದಿಂದ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಹಾಲಿಂಗಪುರ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ಇಬ್ರಾಹಿಂ ಸುತಾರ ಅಮೃತ ವಚನ ಹೇಳಿದರು
ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲ್ಲೂಕು ಘಟಕದಿಂದ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಹಾಲಿಂಗಪುರ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ಇಬ್ರಾಹಿಂ ಸುತಾರ ಅಮೃತ ವಚನ ಹೇಳಿದರು   

ರಾಯಚೂರು: ದೇಶದಲ್ಲಿ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಇನ್ನುಳಿದವರ ಜವಾಬ್ದಾರಿಗಿಂತಲೂ ಶಿಕ್ಷಕರ ಹೊಣೆಗಾರಿಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಮಹಾಲಿಂಗಪುರ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ಇಬ್ರಾಹಿಂ ಸುತಾರ ಹೇಳಿದರು.

ನಗರದ ಕೊಠಾರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲ್ಲೂಕು ಘಟಕದಿಂದ ಗುರುವಾರ ಏರ್ಪಡಿಸಿದ್ದ 2019–20ನೇ ಸಾಲಿನ 6ನೇ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮ್ಮೇಳನ, ಗುರುಸಾರ್ವಭೌಮ ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರ ಕಾರ್ಯಾಗಾರದಲ್ಲಿ ಅಮೃತ ವಚನ ಹೇಳಿದರು.

ಒಂದು ಮಗುವನ್ನು ಉತ್ತಮ ಪ್ರಜೆಯಾಗಿಸುವಲ್ಲಿ ಪಾಲಕರು, ಶಿಕ್ಷಕರು, ಧರ್ಮ ಗುರುಗಳು ಹಾಗೂ ಸಮಾಜದ ಮುಖಂಡರೆಲ್ಲರೂ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಇದರಲ್ಲಿ ಅತಿಹೆಚ್ಚು ಮಾರ್ಗದರ್ಶನ ಶಿಕ್ಷಕರಿಂದ ಒದಗುತ್ತದೆ. ಶಿಸ್ತು, ಕ್ಷಮಾಗುಣ ಹಾಗೂ ಕರ್ತವ್ಯನಿಷ್ಠೆಯ ಪರಿಪಾಲಿಸುವವರು ನಿಜವಾದ ಶಿಕ್ಷಕರಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ನಾಲ್ಕು ಗುಣಗಳನ್ನು ಕಲಿಸಬೇಕಾಗುತ್ತದೆ ಎಂದರು.

ADVERTISEMENT

ವಿದ್ಯೆ, ಧೈರ್ಯ, ನೈತಿಕತೆ ಹಾಗೂ ಸದ್ಭಾವಗಳನ್ನು ಕಲಿಸಬೇಕು. ಅಜ್ಞಾನ ತೊಲಗಿಸುವ, ಮೂಢನಂಬಿಕೆಗಳಿಂದ ಹೊರಬರುವ ಶಿಕ್ಷಣವನ್ನು ನೀಡಬೇಕು. ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ಧೈರ್ಯವನ್ನು ತುಂಬಬೇಕು. ನೌಕರಿ ಮಾಡುವುದಕ್ಕೆ ವಿದ್ಯೆ ಎನ್ನುವ ಭ್ರಮೆಯಿಂದ ಹೊರಬರುವಂತಹ ವಿದ್ಯೆ ಕಲಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪಾಠಗಳನ್ನು ಕಲಿಯಬೇಕು. ಅನೇಕಾಗ್ರತೆ ಮತ್ತು ಶೂನ್ಯಾಗ್ರತೆಯಲ್ಲಿದ್ದರೆ ಶಿಕ್ಷಕರು ಹೇಳುವುದು ತಲೆಯೊಳಗೆ ಹೋಗುವುದಿಲ್ಲ. ಶ್ರದ್ಧೆ ಮತ್ತು ವಿದ್ಯೆ ಎರಡು ಪೂರಕವಾಗಿದ್ದು, ಶ್ರದ್ಧೆ ಹೆಚ್ಚಾದಂತೆ ವಿದ್ಯೆಯು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಸಮಾಜ ತಿದ್ದುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಈಗಿನಿಂದಲೇ ಒಳ್ಳೆಯ ಸಂಗತಿಗಳನ್ನು ಹೇಳಿಕೊಡಬೇಕಿದೆ. ಬೆಳವಣಿಗೆ ಹಂತದಲ್ಲೇ ಪರಿವರ್ತನೆ ಮೈಗೂಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ದೇಶದ ಕಲುಷಿತ ನಗರಗಳಲ್ಲಿ ರಾಯಚೂರು ಕೂಡಾ ಒಂದಾಗಿದೆ. ವಿದ್ಯುತ್‌ ಅಗತ್ಯ ಇದ್ದಾಗ ಆರ್‌ಟಿಪಿಎಸ್‌ ಆರಂಭಿಸಿದ್ದು ಸಕಾಲವಾಗಿತ್ತು. ವೈಟಿಪಿಆಸ್‌ ಅಗತ್ಯ ಇಲ್ಲದಿದ್ದರೂ ಪ್ರಾರಂಭವಾಗಿದೆ. ಅದರಿಂದಾಗಿ ವಿಮಾನ ನಿಲ್ದಾಣ ಮಾಡುವುದು ಕೈ ತಪ್ಪುವಂತಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ್‌ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರಿಗೆ ವೇತನ ವಿಳಂಬ ಮಾಡುತ್ತಿರುವ ಕ್ರಮದಿಂದ ಸಾಕಷ್ಟು ನೊಂದಿದ್ದೇನೆ. ಈ ಬಗ್ಗೆ ಎಲ್ಲ ಕಡೆಗಳಲ್ಲೂ ಶಿಕ್ಷಕರ ಸಂಕಷ್ಟದ ಧ್ವನಿ ತಲುಪಿಸುವ ಕಾರ್ಯ ಮಾಡಿದ್ದೇನೆ. ಖಜಾನೆ–2 ಸಾಫ್ಟ್‌ವೇರ್‌ ಸಮರ್ಪಕ ಕಾರ್ಯನಿರ್ವಹಣೆ ಆರಂಭಿಸಿದ ಬಳಿಕ ವೇತನ ವಿಳಂಬ ಸಮಸ್ಯೆ ತಪ್ಪಬಹುದು ಎನ್ನುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಗಣ್ಯರಿಂದ ಪ್ರಶಸ್ತಿ: ರಾಯಚೂರಿನ ಕಾನ್ವೆಂಟ್‌ ‍ಪ್ರೌಢಶಾಲೆಯ ಮುಖ್ಯಗುರು ಸಿಸ್ಟರ್‌ ಸುನೀತ ಮೊಂತಿ ಸಿಲ್ವಿಯಾ ಸಲ್ಡಾನ್‌, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕಸ್ತೂರಿ, ಕಲ್ಮಲಾ ಸರ್ಕಾರಿ ಪ್ರೌಢಶಾಲೆಯ ನಿಂಗಪ್ಪ ಎಸ್‌., ಜಹೀರಾಬಾದ್‌ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಅಶ್ವಿನಿ ವಿ., ಉಡಮಗಲ್‌ ಖಾನಾಪೂರ ಸರ್ಕಾರಿ ಪ್ರೌಢಶಾಲೆಯ ವೀರೇಂದ್ರ ಪಾಟೀಲ, ಯಾಪಲದಿನ್ನಿ ಸರ್ಕಾರಿ ಪ್ರೌಢಶಾಲೆಯ ಪಾರ್ವತೆವ್ವ ಭಂಡಾರಿ, ಇಡಪನೂರು ಸರ್ಕಾರಿ ಉರ್ದು ಪ್ರೌಢಶಾಲೆಯ ನಸೀಮಾ ಫಾತಿಮಾ, ನೆಲಹಾಳ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ರಾಮಣ್ಣ ಪೂಜಾರಿ, ಬಿಜನಗೇರಾ ಸರ್ಕಾರಿ ಪ್ರೌಢಶಾಲೆಯ ಸವಿತಾ, ಗುಂಜಳ್ಳಿ ಸರ್ಕಾರಿ ಪ್ರೌಢಶಾಲೆಯ ರಾಧಾ ಕೆ., ಚಂದ್ರಬಂಡಾ ಸರ್ಕಾರಿ ಪ್ರೌಢಶಾಲೆಯ ಸ್ಮಿತಾ ಶಿಕ್ಷಕರಿಗೆಲ್ಲ 2019–20ನೇ ಸಾಲಿನ ‘ಗುರು ಸಾರ್ವಭೌಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್‌. ಗೋನಾಳ, ರಾಯಚೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸೈಯದ್‌ ಸಿರಾಜಹುಸೇನ್‌, ವೀರಭದ್ರಪ್ಪ, ನಂದೀಶ, ಯಂಕಪ್ಪ ಫಿರಂಗಿ, ಪಾಂಡುರಂಗ ದೇಸಾಯಿ, ಮಲ್ಲಯ್ಯ, ಮೋಹಿನುಲ್‌ ಹಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.