ಸಿಂಧನೂರು: ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿ
ಸಂಯುಕ್ತಾಶ್ರಯದಲ್ಲಿ ನಗರದ ಸ್ತ್ರೀಶಕ್ತಿ ಭವನದ ಪಕ್ಕದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯನ್ನು 9ನೇ ದಿನವಾದ ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಶೋಭಾಯಾತ್ರೆ ಕೈಗೊಂಡು ವಿಸರ್ಜನೆ ಮಾಡಲಾಯಿತು.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕರಿಬಸವನಗರದ ರಂಭಾಪುರಿ ಶಾಖಾಖಾಸಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ.ಕರಿಯಪ್ಪ ಹಾಗೂ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಹಚ್ಚೊಳ್ಳಿ ಅವರು ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ನಟರಾಜ ಕಾಲೊನಿ ರಸ್ತೆಗೆ ತೆರಳಿತು. ಈ ವೇಳೆ ಮಹಾವೀರ ಸಮಾಜದ ಮುಖಂಡರು ತಂಪು ಪಾನೀಯ ವಿತರಿಸಿದರು. ನಂತರ ಟಿಪ್ಪುಸುಲ್ತಾನ್ ರಸ್ತೆ ಮೂಲಕ ಬಡಿಬೇಸ್‍ನ ಮಸ್ಜೀದ್ ಬಳಿ ತಲುಪಿದಾಗ ಮುಸ್ಲಿಂ ಸಮಾಜದ ಸೈಯ್ಯದ್ ಹಾರೂನ್‍ಪಾಷಾ ಜಾಗೀರದಾರ್, ಖಾಜಿಮಲಿಕ್ ವಕೀಲ ಮತ್ತಿತರ ಮುಖಂಡರು ಬೃಹತ್ಕಾರದ ಹೂವಿನ ಹಾರವನ್ನು ಗಣಪತಿಗೆ ಹಾಕುವ ಮೂಲಕ ಸ್ವಾಗತಿಸಿಕೊಂಡು, ಕಾರ್ಯಕರಿಗೆ ಸಿಹಿ ಹಂಚಿದರು. ಬಳಿಕ ಹಳೆಬಜಾರ್ ರಸ್ತೆ, ಕಿತ್ತೂರುರಾಣಿ ಚೆನ್ನಮ್ಮ ಸರ್ಕಲ್, ಕನಕದಾಸ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಮಹಾತ್ಮಗಾಂಧಿ ವೃತ್ತ ಹಾಗೂ ಕುಷ್ಟಗಿ ರಸ್ತೆಯ ಮೂಲಕ ತಾಲ್ಲೂಕಿನ ತುರ್ವಿಹಾಳ ಬಳಿಯಿರುವ ಎಡದಂಡೆ ಮುಖ್ಯಕಾಲುವೆಗೆ ತೆರಳಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಗೊಂಬೆ ಕುಣಿತ, ಕೇರಳ ಮಾದರಿ ವಾದ್ಯ, ಡೊಳ್ಳು ಕುಣಿತ ಮತ್ತಿತರ ವಾದ್ಯಮೇಳಗಳು ಶೋಭಾಯಾತ್ರೆಗೆ ಮೆರಗು ತಂದವು. ಇನ್ನು ಮೆರವಣಿಗೆಯುದ್ದಕ್ಕೂ ಸುಮಾರು ನಾಲ್ಕೈದು ಸಾವಿರ ಯುವಕರು, ಸಾರ್ವಜನಿಕರು ಡಿಜೆ ಹಾಡುಗಳಿಗೆ ಕುಣಿದು, ಪರಸ್ಪರ ಕೇಸರಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಬೃಹತ್ ಆಕಾರದ ಕೇಸರಿ ಧ್ವಜಗಳು, ಶಾಲುಗಳು ರಾರಾಜಿಸಿದವು.
ಬಿಗಿ ಬಂದೋಬಸ್ತ್: ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಎಚ್, ಡಿವೈಎಸ್‍ಪಿ ಬಿ.ಎಸ್.ತಳವಾರ, ಸರ್ಕಲ್ ಇನ್‌ಪೆಕ್ಟರ್ ವೀರಾರೆಡ್ಡಿ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ದುರುಗಪ್ಪ ಡೊಳ್ಳಿನ್ ಸೇರಿದಂತೆ ಗ್ರಾಮೀಣ, ಬಳಗಾನೂರು, ತುರ್ವಿಹಾಳ, ಮಸ್ಕಿ ಪಿಎಸ್‌ಐಗಳು ಸೇರಿದಂತೆ ನೆರೆಹೊರೆಯ ಪಟ್ಟಣಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಗಣ್ಯರು ಭಾಗಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಬಿಜೆಪಿ ಮುಖಂಡರಾದ ಕೆ.ಮರಿಯಪ್ಪ, ರಾಜೇಶ ಹಿರೇಮಠ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗವೇಣಿ ಪಾಟೀಲ, ಮುಖಂಡರಾದ ಎಸ್.ಶರಣೇಗೌಡ, ಬಸವರಾಜ ಹಿರೇಗೌಡರ, ಸಿದ್ರಾಮೇಶ ಮನ್ನಾಪುರ, ಪಂಪನಗೌಡ ಎಲೆಕೂಡ್ಲಿಗಿ, ಶರಣಬಸವ ವಕೀಲ, ಆರ್.ಸಿ.ಪಾಟೀಲ, ಕೆ.ಹನುಮೇಶ, ಯಂಕೋಬ ನಾಯಕ, ಸುಮಿತ್ ತಡಕಲ್ ಸೇರಿದಂತೆ ವಿವಿಧ ಪಕ್ಷಗಳ ನೂರಾರು ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.