ADVERTISEMENT

ಐತಿಹಾಸಿಕ ಗ್ರಾಮವಾದರೂ ಅಭಿವೃದ್ಧಿಗೆ ಆದ್ಯತೆ ಸಿಕ್ಕಿಲ್ಲ!

‘ಗ್ರಾಮಾಯಣ’

ಬಸವರಾಜ ಬೋಗಾವತಿ
Published 8 ಅಕ್ಟೋಬರ್ 2018, 19:45 IST
Last Updated 8 ಅಕ್ಟೋಬರ್ 2018, 19:45 IST
ಮಾನ್ವಿ ತಾಲ್ಲೂಕು ಚೀಕಲಪರ್ವಿ ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆ
ಮಾನ್ವಿ ತಾಲ್ಲೂಕು ಚೀಕಲಪರ್ವಿ ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆ   

ಮಾನ್ವಿ: ತಾಲ್ಲೂಕಿನ ಗಡಿ ಗ್ರಾಮ ತುಂಗಭದ್ರಾ ನದಿ ತಟದಲ್ಲಿರುವ ಚೀಕಲಪರ್ವಿ, ದಾಸತ್ರಯರಲ್ಲಿ ಒಬ್ಬರಾದ ವಿಜಯದಾಸರು ಜನಿಸಿದ ಊರು.

ವಿಜಯನಗರದ ಅರಸ ಕೃಷ್ಣದೇವರಾಯನ ದತ್ತಿಯ ನೆರವಿನಿಂದ ನಿರ್ಮಿಸಲಾದ ತಿರುವೆಂಗಳನಾಥ ದೇಗುಲ (ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ)ದ ಜೀರ್ಣೋದ್ಧಾರದ ಕಾರ್ಯ ಈಗ ನಡೆಯುತ್ತಿದೆ. ಪುರಾತನ ರಾಮಲಿಂಗೇಶ್ವರ ದೇಗುಲ, ಆಂಜನೇಯ ಹಾಗೂ ಮಾರಿಕಾಂಬ ದೇವಸ್ಥಾನಗಳು ಗ್ರಾಮದಲ್ಲಿವೆ. ಇಲ್ಲಿನ ಹಲವು ಪ್ರಾಚೀನ ಶಿಲಾಶಾಸನಗಳು ಐತಿಹಾಸಿಕ ಹಿನ್ನೆಲೆಯನ್ನು ವಿವರಿಸುತ್ತವೆ.

ಪುರಾತನ ರುದ್ರಮುನೀಶ್ವರ ಮಠ ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ದಾಸೋಹ ಕೇಂದ್ರವಾಗಿದೆ. ಪ್ರತಿ ವರ್ಷ ಗ್ರಾಮದಲ್ಲಿ ನಡೆಯುವ ವಿಜಯದಾಸರ ಆರಾಧನೆ, ರುದ್ರಮುನೀಶ್ವರ ಮಠದ ಜಾತ್ರೆ ಹಾಗೂ ಆರಾಧನಾ ಮಹೋತ್ಸವಗಳಿಗೆ ಅಸಂಖ್ಯಾತ ಭಕ್ತರು ನೆರೆಯುತ್ತಾರೆ.

ADVERTISEMENT

ಐತಿಹಾಸಿಕವಾಗಿ ಚೀಕಲಪರ್ವಿ ಮಹತ್ವದ ಸ್ಥಳವಾಗಿದ್ದರೂ ಜನರ ಅನುಕೂಲಕ್ಕಾಗಿ ಮೂಲ ಸೌಕರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಿಲ್ಲ. ಚೀಕಲಪರ್ವಿ ಪ್ರತಿವರ್ಷ ನೆರೆಹಾವಳಿಗೆ ಒಳಗಾಗುತ್ತದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದ ನೀರು ಹರಿಸಿದಾಗಲೆಲ್ಲಾ ಈ ಗ್ರಾಮ ಜಲಾವೃತವಾಗುತ್ತದೆ. ರೈತರ ಜಮೀನುಗಳಲ್ಲಿ ನೀರು ಹರಿದು ಬೆಳೆಗಳು ಹಾಳಾಗುತ್ತವೆ. 1992 ಹಾಗೂ 2009ರಲ್ಲಿ ಸಂಭವಿಸಿದ ಭೀಕರ ನೆರೆಹಾವಳಿಗೆ ಗ್ರಾಮ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು.

2009ರ ನೆರೆಹಾವಳಿ ನಂತರ ರಾಜ್ಯ ಸರ್ಕಾರ ಗ್ರಾಮದ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿತ್ತು. ಗ್ರಾಮದ ಹೊರವಲಯದ 63ಎಕರೆ ಪ್ರದೇಶದಲ್ಲಿ 544 ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ಮನೆಗಳು ಹಂಚಿಕೆ ಆಗದೆ ಇರುವುದರಿಂದ ಹಾಳು ಬಿದ್ದಿವೆ.

ಹೆದ್ದಾರಿ ಮಂಜೂರು: ಚೀಕಲಪರ್ವಿ ಹಾಗೂ ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಸಂಪರ್ಕ ಸೇತುವೆ ನಿರ್ಮಾಣ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಆಂಧ್ರಪ್ರದೇಶದ ಗುತ್ತಿಯಿಂದ ಕುಂಬಳೂರು, ಚೀಕಲಪರ್ವಿ ಮೂಲಕ ಮಾನ್ವಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದೆ ಎನ್ನಲಾಗುತ್ತಿದೆ.

‘ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಳಜಿವಹಿಸಿ ಚೀಕಲಪರ್ವಿ ಬಳಿ ಸೇತುವೆ ನಿರ್ಮಿಸಿದರೆ, ಆಂಧ್ರ ಪ್ರದೇಶಕ್ಕೆ ಸುಲಭ ಸಂಪರ್ಕ ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಈ ಭಾಗದ ವ್ಯಾಪಾರ, ವಹಿವಾಟು ಅಭಿವೃದ್ಧಿಯಾಗುತ್ತದೆ’ ಎಂಬುದು ಸ್ಥಳೀಯ ವಾಣಿಜ್ಯೋದ್ಯಮಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.