ADVERTISEMENT

ಸಂರಕ್ಷಣೆಯಾಗದ ರಾಯಚೂರಿನ ಸ್ಮಾರಕಗಳು: ಇದುವರೆಗೂ ಬಳಕೆಯಾಗದ ಅನುದಾನ

ನಾಗರಾಜ ಚಿನಗುಂಡಿ
Published 13 ಫೆಬ್ರುವರಿ 2022, 19:30 IST
Last Updated 13 ಫೆಬ್ರುವರಿ 2022, 19:30 IST
ಲಿಂಗಸುಗೂರು ತಾಲ್ಲೂಕು ಜಲದುರ್ಗ ಕೋಟೆ ನೆಲಸಮಗೊಳ್ಳುತ್ತ ಹೋಗುತ್ತಿದ್ದರು ಕೂಡ ಪ್ರವಾಸಿಗರ ಕಣ್ಣಿಗೆ ದೂರದಿಂದ ಕಾಣುವ ವಿಹಂಗಮ ನೋಟ
ಲಿಂಗಸುಗೂರು ತಾಲ್ಲೂಕು ಜಲದುರ್ಗ ಕೋಟೆ ನೆಲಸಮಗೊಳ್ಳುತ್ತ ಹೋಗುತ್ತಿದ್ದರು ಕೂಡ ಪ್ರವಾಸಿಗರ ಕಣ್ಣಿಗೆ ದೂರದಿಂದ ಕಾಣುವ ವಿಹಂಗಮ ನೋಟ   

ರಾಯಚೂರು: ಐತಿಹಾಸಿಕ ಸ್ಮಾರಕಗಳು ಜಿಲ್ಲೆಯಾದ್ಯಂತ ಹಾಸುಹೊಕ್ಕಾಗಿ ಪಸರಿಸಿಕೊಂಡಿವೆ. ಆದರೆ, ಅವುಗಳನ್ನು ಮೂಲ ರೂಪದಲ್ಲಿ ಸಂರಕ್ಷಿಸಿ, ಪ್ರೇಕ್ಷಣೀಯವಾಗಿಸುವುದನ್ನು ನಿರ್ಲಕ್ಷಿಸಲಾಗಿದೆ.

ರಾಯಚೂರಿನ ನವರಂಗ ದರವಾಜ ಕೋಟೆಯೊಳಗೆ ಕರ್ನಾಟಕ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಚೇರಿ ಇದೆ. ಆದರೆ ಕಾಯಂ ಸಿಬ್ಬಂದಿ ಹಾಗೂ ಅಧಿಕಾರಿಗಳಿಲ್ಲದೆ ಅನಾಥ ಸ್ಥಿತಿಯಲ್ಲಿದೆ. ಕಲಬುರಗಿ ಕಚೇರಿಯಿಂದ ಕ್ಯುರೇಟರ್‌ (ಶಾಸನ ಪಾಲಕ) ಒಬ್ಬರನ್ನು ನಿಯೋಜನೆ ಮಾಡಲಾಗಿದೆ. ಎರಡೂ ಜಿಲ್ಲೆಗಳ ಮಧ್ಯೆ ಸಂಚರಿಸುವುದು, ಜಿಲ್ಲಾಮಟ್ಟದ ಸಭೆಗಳಿಗೆ ಹಾಜರಾಗುತ್ತಾರೆ. ಕೋವಿಡ್‌ ಮಹಾಮಾರಿ ಕಾರಣದಿಂದ ಇದುವರೆಗೂ ಯಾವುದೇ ಕಾರ್ಯ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂಬುದು ಸಿಬ್ಬಂದಿಯ ವಿವರಣೆ.

ರಾಯಚೂರಿನ ನಗರದಲ್ಲಿ ಎರಡು ಸುತ್ತಿನ ಕೋಟೆಗಳಿದ್ದು, ಒಳಕೋಟೆ (ಅಂದ್ರೂನ್‌ ಕಿಲ್ಲಾ) ಹಾಗೂ ಹೊರಕೋಟೆ (ಬೆಹರೂನ್‌ ಕಿಲ್ಲಾ) ಸಂರಕ್ಷಣೆ ಮಾಡದಿರುವ ಕಾರಣ, ಬೃಹತ್‌ ಶಿಲಾಶಾಸನಗಳು ಉರುಳುತ್ತಿವೆ. ಪ್ರತಿದಿನ ಕೋಟೆ ಜಾಗ ಅತಿಕ್ರಮಣವಾಗುತ್ತಿದ್ದರೂ ಜಿಲ್ಲಾಡಳಿತ, ಕಂದಾಯ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳು ಮೌನ ವಹಿಸಿವೆ.

ADVERTISEMENT
ರಾಯಚೂರು ತಾಲ್ಲೂಕು ಮಲಿಯಾಬಾದ್‌ ಗ್ರಾಮದ ಜಮೀನೊಂದರಲ್ಲಿ ದಾರಿಕಾಣದೆ ನಿಂತಿರುವ ಕಲ್ಲಾನೆಗಳು

ನಗರದ ಮಧ್ಯೆ ಭಾಗದಲ್ಲಿರುವ ಕಾಟೆ ದರವಾಜ, ಮಲಿಯಾಬಾದ್‌ ಕಲ್ಲಾನೆಗಳು, ತಿನ್‌ ಕಂದಿಲ್‌ ಕಲ್ಲಾನೆಗಳು, ಪೊಲೀಸ್‌ ಮೈದಾನದಲ್ಲಿ ಆವರಿಸಿಕೊಂಡಿರುವ ಸ್ಮಾರಕಗಳು, ಮಕ್ಕಾದರವಾಜಾ (ಪಶ್ಚಿಮದ್ವಾರ), ನವರಂಗ ದರವಾಜಾ (ಉತ್ತರದ್ವಾರ), ಕಂದಕ ದರವಾಜ (ದಕ್ಷಿಣದ್ವಾರ) ಮತ್ತು ಕೊಡ್ಡಿ ದರವಾಜಾ (ನೈರುತ್ಯದ್ವಾರ) ಹೀಗೆ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಮೂಲರೂಪದಲ್ಲಿ ಉಳಿಸಿಕೊಂಡು ಅಭಿವೃದ್ಧಿ ಮಾಡುವ ಕಾರ್ಯ ನಡೆಯುತ್ತಿಲ್ಲ.

ದೇವದುರ್ಗ ತಾಲ್ಲೂಕಿನ ಗಬ್ಬೂರು, ಲಿಂಗಸುಗೂರು ತಾಲ್ಲೂಕಿನ ಮುದಗಲ್‌ ಕೋಟೆ, ಜಲದುರ್ಗದಲ್ಲಿರುವ ಐತಿಹಾಸಿಕ ಕುರುಹುಗಳನ್ನು ಅಚ್ಚುಕಟ್ಟುಗೊಳಿಸಿ, ಪ್ರವಾಸಿಗರನ್ನು ಸೆಳೆಯುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಇದಲ್ಲದೆ ಇತಿಹಾಸ ಪ್ರಸಿದ್ಧವಾಗಿರುವ ದಾಸರ ಕುರುಹುಗಳನ್ನು ಕಾಪಾಡಿಕೊಂಡು, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವೂ ಆಗಿಲ್ಲ. ಸಾಕಷ್ಟು ಮೂಲೆಗುಂಪಾಗಿರುವ ಕಲ್ಲಾನೆಗಳ ಸೌಂದರ್ಯ ಕಾಪಾಡಿಕೊಳ್ಳುವ ಕೆಲಸ ಇಲ್ಲಿಯವರೆಗೂ ಆಗಿಲ್ಲ.

ಚಿಕ್ಕಯ್ಯ ಪಂಡಿತರನ್ನು
ಪರಿಚಯಿಸುವ ಶಾಸನಗಳು

ತಾಲ್ಲೂಕಿನಾದ್ಯಂತ ಶಿಲಾಶಾಸನಗಳು

ಮಾನ್ವಿ: ಪಟ್ಟಣ ಹಾಗೂ ಗ್ರಾಮಗಳ ಪ್ರಮುಖ ಸ್ಥಳಗಳು, ಬೆಟ್ಟ ಗುಡ್ಡಗಳು ಹಾಗೂ ದೇವಸ್ಥಾನಗಳ ಹತ್ತಿರ ಅನೇಕ ವೀರಗಲ್ಲುಗಳು, ಶಿಲಾಶಾಸನಗಳು ಕಂಡು ಬರುತ್ತವೆ.

ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಕೋನಾಪುರ ಪೇಟೆಯ ಅಗಸೆ, ಸಿಮೆಂಟ್ ರಸ್ತೆಯ ಬಸವಣ್ಣ ದೇವಸ್ಥಾನ, ತಾಲ್ಲೂಕಿನ ನೀರಮಾನ್ವಿ, ಬೈಲ್ ಮರ್ಚೆಡ್ ಗ್ರಾಮದ ಬೆಟ್ಟಗಳಲ್ಲಿ ವೀರಗಲ್ಲುಗಳು, ಶಿಲಾಶಾಸನಗಳು ಇವೆ. ನೀರಮಾನ್ವಿ ಗ್ರಾಮದಲ್ಲಿ 11 ವೀರಗಲ್ಲುಗಳು, 5 ವೀರಮಹಾಸತಿ ಶಿಲ್ಪಗಳನ್ನು ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಈಚೆಗೆ ಶೋಧನೆ ಮಾಡಿದ್ದಾರೆ. ವೀರಮಹಾಸತಿ ಶಿಲ್ಪವು 17-18ನೇ ಶತಮಾನದ್ದಾಗಿದೆ.

ಗ್ರಾಮದ ಪೂರ್ವ ದಿಕ್ಕಿಗೆ ನವಶಿಲಾಯುಗ ಕಾಲದ ಬೂದಿಮಣ್ಣು ಹಾಗೂ ಮಡಕೆಯ ಚೂರುಗಳನ್ನು ಅವರು ಶೋಧಿಸಿದ್ದಾರೆ. ಗ್ರಾಮದ ದಕ್ಷಿಣ ದಿಕ್ಕಿನ ಕರೇಗುಡ್ಡದಲ್ಲಿ ನವ ಶಿಲಾಯುಗ ಹಾಗೂ ಬೃಹತ್ ಶಿಲಾಯುಗ ಕಾಲದಲ್ಲಿ ಮಾನವರು ಗವಿಗಳಲ್ಲಿ ವಾಸ ಮಾಡುತ್ತಾ ಬಂಡೆಗಲ್ಲುಗಳ ಮೇಲೆ ಗೂಳಿಗಳು, ಸಾರಂಗ, ಆನೆ, ಹುಲಿ, ಚಿಂಕೆ, ನವಿಲು ಮತ್ತಿತರ ಚಿತ್ರಗಳನ್ನು ಬರದಿರುವ ಬಗ್ಗೆ ಅವರು ತಿಳಿಸಿದ್ದಾರೆ. ಮಾನ್ವಿ ಪಟ್ಟಣದ ಸಿಮೆಂಟ್ ರಸ್ತೆಯಲ್ಲಿ ಬಸವಣ್ಣ ದೇವಸ್ಥಾನದ ಎದುರು ಕ್ರಿ.ಶ1751-1761 ರ ಅವಧಿಯಲ್ಲಿ ಹೈದ್ರಾಬಾದ್ ಪ್ರಾಂತ್ಯದ ಆಳ್ವಿಕೆಯಲ್ಲಿ ಕೆತ್ತಲಾದ ಕನ್ನಡ ಲಿಪಿ ಹೊಂದಿರವ ಶಿಲಾಶಾಸನವನ್ನು ಅವರು ಪತ್ತೆ ಹಚ್ಚಿದ್ದಾರೆ.

ಅನೇಕ ಕಡೆ ಅನಾಥವಾಗಿರುವ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ.

ಚಿಕ್ಕಯ್ಯ ಪಂಡಿತರ ಸ್ಮಾರಕ ರಕ್ಷಿಸಿ

ಸಿಂಧನೂರು: ತಾಲ್ಲೂಕಿನ ದೇವರಗುಡಿ ಗ್ರಾಮದಲ್ಲಿ 12ನೇ ಶತಮಾನದ ಶರಣರ ಸಮಕಾಲೀನರಾದ ಚಿಕ್ಕಯ್ಯ ಪಂಡಿತರ ಸ್ಮಾರಕವಿದ್ದು, ಅದಕ್ಕೆ ಸೂಕ್ತ ರಕ್ಷಣೆ ವ್ಯವಸ್ಥ ಮಾಡಿಕರುವುದಿಲ್ಲ. ಚಿಕ್ಕಯ್ಯ ಪಂಡಿತರು ಬರೆದ 11 ವಚನಗಳು ಲಭ್ಯವಾಗಿವೆ. ಇವರ ಆರಾಧ್ಯ ದೈವ ಹುಳಿಯಮೇಶ್ವರನಾಗಿದ್ದು, ಈಗ ಮಲ್ಲಿಕಾರ್ಜುನ ಎಂದು ಕರೆಯಲಾಗುತ್ತಿದೆ.

ಮೂಲತಃ ವಿಪ್ರನಾಗಿದ್ದ ಚಿಕ್ಕಯ್ಯ ಪಂಡಿತ ಬಸವಣ್ಣನವರ ಪ್ರಭಾವಕ್ಕೊಳಗಾಗಿ ವೀರಶೈವ ದೀಕ್ಷೆಯನ್ನು ಪಡೆದಿದ್ದರು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಇವರನ್ನು ಕುರಿತಾದ ನಾಲ್ಕು ಶಾಸನಗಳಿದ್ದು, ಎರಡು ಶಾಸನಗಳು ದೇವರಗುಡಿಯಲ್ಲಿವೆ. ಈ ಶಾಸನಗಳನ್ನು ಎತ್ತರದ ಸ್ಥಳಗಳಲ್ಲಿ ಇಟ್ಟು ಸುತ್ತ ತಂತಿಬೇಲಿ ಹಾಕಿ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ.

ಸಿಂಧನೂರಿನಿಂದ ದೇವರಗುಡಿಗೆ ಹೋಗುವ ಕ್ರಾಸ್‌ನಲ್ಲಿ ‘ಚಿಕ್ಕಯ್ಯ ಪಂಡಿತರ ಕ್ಷೇತ್ರಕ್ಕೆ ಸ್ವಾಗತ’ ಎನ್ನುವ ಕಮಾನು ಹಾಕಿದರೆ ಇತಿಹಾಸ ಆಸಕ್ತರು, ಸಾಹಿತಿಗಳು ಸೇರಿದಂತೆ ಸಾಂಸ್ಕೃತಿಕ ಬದುಕನ್ನು ಪ್ರೀತಿಸುವ ಜನರು ಆಸ್ಥಳಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗತವೈಭವ ಸಾರುವ ಗುಡಿ–ಗೋಪುರ

ಲಿಂಗಸುಗೂರು:ತಾಲ್ಲೂಕಿನಲ್ಲಿ ರಾಜ ಮಹಾರಾಜದ ಕಾಲದ ಜಲದುರ್ಗ, ಮುದಗಲ್ಲ, ಕರಡಕಲ್ಲ ಬಿಲ್ಲಮ ಸೇರಿದಂತೆ ಇತರೆ ಕೋಟೆ ಕೊತ್ತುಗಳು ವರ್ಷದಿಂದ ವರ್ಷಕ್ಕೆ ನಶಿಸುತ್ತ ಹೊರಟಿವೆ. ನವಲಿ ಜಡಿಶಂಕರಲಿಂಗ, ಗುರುಗುಂಟಾ ಅಮರೇಶ್ವರ, ನಡುಗಡ್ಡೆ ಆಮಲಿಂಗೇಶ್ವರ ಸೇರಿದಂತೆ ಇತರೆ ಐತಿಹಾಸಿಕ ಗತ ವೈಭವ ಸಾರುವ ಗುಡಿ-ಗೋಪುರಗಳ ಅಭಿವೃದ್ಧಿ ಕಾಣಸಿಗುತ್ತಿಲ್ಲ.

ಬ್ರಿಟಷ್‍ ಅಧಿಕಾರಿಗಳು, ಸುರಪುರದ ರಾಜ ವಂಶಸ್ಥರ ಸಮಾಧಿಗಳು, ಕೆರೆ ಬಾವಿಗಳು, ವಿಭಿನ್ನ ಶಿಲ್ಪ ಕಲೆ ಸಾರ ಪ್ರತಿನಿಧಿಸುವ ದೇವಸ್ಥಾನಗಳು, ಸ್ಥಳೀಯ ಮಾಹಿತಿ ನೀಡುವಂತೆ ಪ್ರವಾಸಿ ಮಂದಿರ, ಉಪ ವಿಭಾಗಾಧಿಕಾರಿ ಕಚೇರಿ, ಸ್ಪೋರ್ಸ್ಸ್‍ ಕ್ಲಬ್‍ನಂತಸಾರ್ವಜನಿಕ ಕಟ್ಟಡಗಳು ನೆಲಸಮಗೊಳ್ಳುತ್ತ ಹೊರಟಿವೆ.


ಪುರಾತತ್ವ, ಪ್ರಾಚ್ಯವಸ್ತು ಇಲಾಖೆ, ಸ್ಥಳೀಯ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡಲು ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಸ್ಮಾರಗಳ ಇತಿಹಾಸ, ಮಹತ್ವ, ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ, ಉತ್ಸವಗಳ ಆಚರಣೆ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂಬುದು ನಾಗರಿಕರ ಅಂಬೋಣ.

ಸಿಂಘನ ರಾಜನ ಕಾಲದ ದೇಗುಲ

ದೇವದುರ್ಗ: ತಾಲ್ಲೂಕಿನ ಗಬ್ಬೂರು ಗ್ರಾಮದ ಶಾಂತಿನಗರ ಹತ್ತಿರ ಏಳುಭಾವಿ ದಡದ ಮೇಲೆ ಉತ್ತರಾಭಿಮುಖವಾಗಿ ದ್ರಾವಿಡ ಶೈಲಿಯಲ್ಲಿ ನೆಲಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವು ಐತಿಹಾಸಿಕ ಪ್ರಸಿದ್ಧವಾಗಿದೆ. ಸಂಪೂರ್ಣವಾಗಿ ನೆಲಸಮವಾಗಿದ್ದು ದೇವಸ್ಥಾನವು 2007 ರಲ್ಲಿ ಪುರಾತತ್ವ ಇಲಾಖೆಯು ಗುರುತಿಸಿದ್ದು ಅಭಿವೃದ್ಧಿ ಕಾಣದೆ ದೇವಸ್ಥಾನ ಹಾಳುಕೊಂಪೆ ಯಂತಾಗಿದೆ.

ಈ ದೇವಾಲಯವನ್ನು ಕ್ರಿಶ 1213 ರಲ್ಲಿ ದೇವಗಿರಿ ಯಾದವ ವಂಶದ ಸಿಂಘಣ ಎಂಬ ರಾಜನು ಈ ದೇವಾಲಯವನ್ನು ನಿರ್ಮಾಣ ಮಾಡಿದನೆಂದು ಶಿಲಾ ಶಾಸನವು ತಿಳಿಸುತ್ತದೆ. ಈ ದೇವಾಲಯದಲ್ಲಿ ಶ್ರೀ ಲಕ್ಷ್ಮಿವೆಂಕಟರಮಣ ಜತೆಗೆ ಮಹಾರುದ್ರ ದೇವರು, ಮುಖ್ಯಪ್ರಾಣ (ಹನುಮಂತ), ಮತ್ತು ಶ್ರೀ ಲಕ್ಷ್ಮೀ ನಾರಾಯಣ ಇರುವ ಐತಿಹಾಸಿಕ ಮಾಹಾಸಂಗಮ ದೇವಸ್ಥಾನಗಳಿವೆ.

ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದ ದೂಳಿನಲ್ಲಿಸ್ಮಾರಕಗಳು
ಮಾನ್ವಿ ಪಟ್ಟಣದ ಕೋನಾಪುರಪೇಟೆಯ ಅಗಸಿ ಹತ್ತಿರ ಇರುವ ವೀರಗಲ್ಲುಗಳು
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಶಾಂತಿನಗರ ಹತ್ತಿರ ಬರುವ ಏಳುಭಾವಿ ದಡದ ಮೇಲೆ ಉತ್ತರಾಭಿಮುಖವಾಗಿ ದ್ರಾವಿಡ ಶೈಲಿಯಲ್ಲಿ ನೆಲಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಮಹಾಸಂಗಮ ದೇವಸ್ಥಾನ

-ಪೂರಕ ವರದಿಗಳು: ಡಿ.ಎಚ್‌.ಕಂಬಳಿ, ಬಸವರಾಜ ಭೋಗಾವತಿ, ಬಿ.ಎ.ನಂದಿಕೋಲಮಠ, ಯಮನೇಶ ಗೌಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.