ADVERTISEMENT

‘ಆರೋಗ್ಯಕ್ಕಾಗಿ ದಿಗ್ಬಂಧನ’ದಲ್ಲಿದ್ದ ವ್ಯಕ್ತಿ ಭೇಟಿ: ಆತಂಕ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 12:13 IST
Last Updated 21 ಮಾರ್ಚ್ 2020, 12:13 IST

ಶಕ್ತಿನಗರ: ಕೈ ಮಣಿಕಟ್ಟಿನ ಮೇಲೆ ‘ಹೋಂ ಕ್ವಾರಂಟೈನ್’ (ಆರೋಗ್ಯಕ್ಕಾಗಿ ದಿಗ್ಬಂಧನ) ಸೀಲ್‌ ಹಾಕಲಾಗಿದ್ದ ಕಲಬುರ್ಗಿಯ ಶಹಾಬಾದ್‌ ವ್ಯಕ್ತಿಯೊಬ್ಬರು, ತಾಲ್ಲೂಕಿನ ಶಕ್ತಿನಗರದಲ್ಲಿರುವ ಸಂಬಂಧಿಗಳ ಮನೆಗೆ ಭೇಟಿ ನೀಡಿರುವ ಸುದ್ದಿಯಿಂದ ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾಗಿದ್ದರು.

ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಜನರು ದೂರು ನೀಡಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ, ಮನೆಯಿಂದ ಯಾರೂ ಹೊರಗೆ ಬರದಂತೆ, ಹೊರಗಿನವರು ಮನೆಯತ್ತ ಹೋಗದಂತೆ ಆ ಮನೆಗೆ ಪೊಲೀಸರು ಕೆಲಕಾಲ ಬಂದೋಬಸ್ತ್‌ ಏರ್ಪಡಿಸಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿಯು ಮನೆಗೆ ತಲುಪಿ ಸದಸ್ಯರನ್ನು ವಿಚಾರಿಸಿದರು. ಮುಂದಿನ 14 ದಿನಗಳವರೆಗೆ ಯಾರೂ ಹೊರಬರದಂತೆ ಸೂಚಿಸಿದರು. ಪ್ರತಿದಿನ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ. ಆತಂಕ ಪಡಬಾರದು ಎಂದು ತಿಳಿಸಿದರು.

ದುಬೈನಿಂದ ಶಹಾಬಾದ್‌ಗೆ ಬಂದಿದ್ದ ವ್ಯಕ್ತಿಯ ಮಣಿಕಟ್ಟಿನ ಮೇಲೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಸೀಲ್‌ ಹಾಕಲಾಗಿತ್ತು. ಕೈಗೆ ಸೀಲ್‌ ಇರುವುದನ್ನು ಜನರು ಶನಿವಾರ ಬೆಳಿಗ್ಗೆ ಗಮನಿಸಿದ್ದರು. ಕೂಡಲೇ ಆ ವ್ಯಕ್ತಿಯು ಶಹಾಬಾದ್‌ಗೆ ಮರಳಿದ್ದಾರೆ ಎಂದು ತಿಳಿಸಲಾಗಿದೆ.

ADVERTISEMENT

ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಶಾಕೀರ್,ಶಕ್ತಿನಗರ ಠಾಣೆಯ ಪಿಎಸ್‌ಐ ರಾಮಚಂದ್ರಪ್ಪ, ದೇವಸೂಗೂರು ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.