ADVERTISEMENT

ಲಿಂಗಸುಗೂರಿನಲ್ಲಿ ಮರ್ಯಾದೆಗೇಡು ಹತ್ಯೆ: ಮಗಳ ಕೊಂದು ನದಿಗೆ ಎಸೆದಿದ್ದ ತಂದೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 22:50 IST
Last Updated 27 ಏಪ್ರಿಲ್ 2025, 22:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಿಂಗಸುಗೂರು (ರಾಯಚೂರು ಜಿಲ್ಲೆ): ಬೇರೆ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯೇ ಕೊಲೆ ಮಾಡಿ ಕೃಷ್ಣಾ ನದಿಯಲ್ಲಿ ಎಸೆದಿದ್ದ ಪ್ರಕರಣ ಈಚೆಗೆ ಬಹಿರಂಗವಾಗಿದೆ.

ತಾಲ್ಲೂಕಿನ ಹಂಚಿನಾಳ ಗ್ರಾಮದ ರೇಣುಕಾ (17) ಕೊಲೆಯಾದವಳು. ಆಕೆಯ ತಂದೆ ಲಕ್ಕಪ್ಪ ಕಂಬಳಿ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಕುರುಬ ಸಮುದಾಯಕ್ಕೆ ಸೇರಿದ ರೇಣುಕಾ ಅದೇ ಗ್ರಾಮದ ವಾಲ್ಮೀಕಿ ಸಮುದಾಯದ ಹನುಮಂತ ಎನ್ನುವ ಯುವಕನೊಂದಿಗೆ ಸಲುಗೆಯಿಂದ ಇದ್ದಳು. ಇಬ್ಬರೂ ಮನೆ ಬಿಟ್ಟು ಹೋಗಿದ್ದರು.

ADVERTISEMENT

ಲಕ್ಕಪ್ಪ 2023ರಲ್ಲಿ ಹನುಮಂತನ ವಿರುದ್ಧ ಲಿಂಗಸುಗೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ. ಪೊಲೀಸರು ಹನುಮಂತನನ್ನು ಬಂಧಿಸಿದ್ದರು.

ಮೂರು ತಿಂಗಳ ನಂತರ ಹನುಮಂತ ಜೈಲಿನಿಂದ ಬಿಡುಗಡೆಯಾದ ಮೇಲೂ ರೇಣುಕಾಳೊಂದಿಗೆ ಸಲುಗೆಯಿಂದ ಇದ್ದ. 18 ವರ್ಷ ಪೂರ್ತಿಯಾದ ಮೇಲೆ ತಾನು ಹನುಮಂತನೊಂದಿಗೆ ಹೋಗುತ್ತೇನೆಂದು ರೇಣುಕಾ ಪದೇ ಪದೇ ಹೇಳುತ್ತಿದ್ದಳು. ಇದನ್ನು ಲಕ್ಕಪ್ಪನಿಗೆ ಸಹಿಸಿ ಕೊಳ್ಳಲಾಗುತ್ತಿರಲಿಲ್ಲ.

2024ರ ಸೆ.29ರಂದು ಹಂಚಿನಾಳ ಗ್ರಾಮದಲ್ಲಿನ ತೋಟಕ್ಕೆ ಮಗಳನ್ನು ಕರೆದುಕೊಂಡು ಹೋದ ಲಕ್ಕಪ್ಪ ಹನುಮಂತನೊಂದಿಗೆ ಓಡಾಡದಂತೆ ಬುದ್ಧಿ ಹೇಳಿದ್ದ. ಆದರೆ ಮಗಳು ಆತನನ್ನೇ ಮದುವೆಯಾಗುವುದಾಗಿ ಹಟ ಹಿಡಿದಿದ್ದಳು.

ಇದರಿಂದ ರೊಚ್ಚಿಗೆದ್ದ ಲಕ್ಕಪ್ಪ ಕೊಲೆ ಮಾಡಿ ಮಗಳ ಶವವನ್ನು ಶೀಲಹಳ್ಳಿ ಸೇತುವೆ ಹತ್ತಿರ ಇರುವ ಕೃಷ್ಣಾ ನದಿಯಲ್ಲಿ ಎಸೆದಿದ್ದ. 

ಬೆಳಕಿಗೆ ಬಂದಿದ್ದು ಹೇಗೆ?:  2023ರಲ್ಲಿ ದಾಖಲಿಸಲಾದ ಪೋಕ್ಸೊ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿತ್ತು. ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದರು.

ಲಕ್ಕಪ್ಪ ಎರಡು ಮೂರು ಬಾರಿ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ. ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಲಕ್ಕಪ್ಪ ಮಗಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಲಿಂಗಸುಗೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.