ADVERTISEMENT

ರಾಯಚೂರು: ಚಂಡಮಾರುತ ಚಳಿಗೆ ಮುದುರಿದ ಜೀವನ

ಎರಡು ದಿನಗಳಿಂದ ಬಿಸಿಲಿಲ್ಲದೆ ಸೂರುಬಿಟ್ಟು ಹೊರಬಾರದ ಜನರು

ನಾಗರಾಜ ಚಿನಗುಂಡಿ
Published 27 ನವೆಂಬರ್ 2020, 13:53 IST
Last Updated 27 ನವೆಂಬರ್ 2020, 13:53 IST
ರಾಯಚೂರಿನಲ್ಲಿ ತಂಪು ಹವಾಮಾನ ಮುಂದುವರಿದಿದ್ದರಿಂದ ಶುಕ್ರವಾರ ಮಧ್ಯಾಹ್ನವೂ ಜನರು ಜಾಕೇಟ್‌ ಹಾಕಿಕೊಂಡು ಸಂಚರಿಸುವುದು ಕಂಡುಬಂತು
ರಾಯಚೂರಿನಲ್ಲಿ ತಂಪು ಹವಾಮಾನ ಮುಂದುವರಿದಿದ್ದರಿಂದ ಶುಕ್ರವಾರ ಮಧ್ಯಾಹ್ನವೂ ಜನರು ಜಾಕೇಟ್‌ ಹಾಕಿಕೊಂಡು ಸಂಚರಿಸುವುದು ಕಂಡುಬಂತು   

ರಾಯಚೂರು: ‘ನಿವಾರ್‌’ ಚಂಡಮಾರುತ ಪರಿಣಾಮ ಜಿಲ್ಲೆಯಲ್ಲಿ ಎರಡು ದಿನಗಳಿಂದ ತಂಪು ಆವರಿಸಿದ್ದು, ಜನಜೀವನ ಮುದುರಿಕೊಂಡಿದೆ.

ಬಹುತೇಕ ಜನರು ಜರ್ಕಿನ್‌, ಶಾಲು, ಸ್ವೇಟರ್‌ ಹಾಗೂ ಕಿವಿಗೆ ಬಟ್ಟೆ ಕಟ್ಟಿಕೊಂಡು ಸಂಚರಿಸುತ್ತಿದ್ದಾರೆ. ಚಳಿ ಬಾಧಿಸುವ ಆತಂಕದಿಂದ ಎಂದಿನಂತೆ ಮನೆಗಳಿಂದ ಜನರು ಹೊರಬರುತ್ತಿಲ್ಲ. ಶುಕ್ರವಾರ ದಿನವಿಡೀ ಸಾರ್ವಜನಿಕ ರಸ್ತೆಗಳಲ್ಲಿ ಜನದಟ್ಟಣೆ ಕಂಡುಬರಲಿಲ್ಲ. ಉಸ್ಮಾನಿಯಾ ತರಕಾರಿಮಾರುಕಟ್ಟೆ, ಬಟ್ಟೆ ಬಜಾರ್‌, ಚಂದ್ರಮೌಳೇಶ್ವರ ವೃತ್ತ ಹಾಗೂ ಶಾಪಿಂಗ್‌ ಮಾಲ್‌ಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರಲಿಲ್ಲ.

ದಿನವಿಡೀ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ ಇತ್ತು. ಶುಕ್ರವಾರ ಸೂರ್ಯೋದಯದಿಂದ ಕತ್ತಲು ಸರಿದು ಬೆಳಕಾದರೂ ವಾತಾವರಣ ಬಿಸಿಯಾಗಲಿಲ್ಲ. ರಾಯಚೂರು ಜಿಲ್ಲೆಯು ಮಲೆನಾಡಿನಂತೆ ಬದಲಾಗಿದ್ದರಿಂದ ಜನರು ಮೈ ಮನ ಮುದುರಿಸಿಕೊಂಡಿದ್ದಾರೆ. ಚಳಿಗಾಲದ ಚಳಿಯು ರಾತ್ರಿ ಮತ್ತು ಬೆಳಿಗ್ಗೆ ಮಾತ್ರ ಆವರಿಸಿಕೊಳ್ಳುತ್ತಿತ್ತು. ಇದೀಗ ದಿನವಿಡೀ ಬಿಸಿಲಿನ ಸ್ಪರ್ಶವಿಲ್ಲದೆ ಜನರ ಚಡಪಡಿಕೆ ಹೆಚ್ಚುವಂತಾಗಿದೆ.

ADVERTISEMENT

ರಸ್ತೆ ಪಕ್ಕದ ತಳ್ಳುಬಂಡಿಗಳಲ್ಲಿ ಬಿಸಿಬಿಸಿ ಚಹಾ ಗುಟುಕಿಸಲು ಜನರು ತವಕದಿಂದ ಮುಗಿಬೀಳುತ್ತಿದ್ದಾರೆ. ಶುಕ್ರವಾರ ಸಂಜೆ ವೇಳೆ ಭಜ್ಜಿ ಖರೀದಿಗೂ ಜನರು ಸರದಿ ಕಾಯುತ್ತಿರುವುದು ಸ್ಟೇಷನ್‌ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಎಟಿಎಂ ವೃತ್ತ, ಶೆಟ್ಟಿಭಾವಿ ಚೌಕ್‌, ತೀನ್‌ಕಂದಿಲ್‌, ಲಿಂಗಸುಗೂರು ಮಾರ್ಗ ಹಾಗೂ ವಾಸವಿ ನಗರದಲ್ಲಿ ಇಳಿಸಂಜೆ ಸಾಮಾನ್ಯವಾಗಿತ್ತು. ಆದರೆ, ರಾತ್ರಿಯಾಗುತ್ತಿದ್ದಂತೆ ತುಂತುರು ಮಳೆ ಆರಂಭವಾಗಿದ್ದರಿಂದ ಭಜ್ಜಿ ಖರೀದಿಗೂ ಜನರು ಬರಲಿಲ್ಲ.

ತುಂತುರು ಮಳೆ: ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ತುಂತುರು ಮಳೆ ಸುರಿಯಿತು. ಶಕ್ತಿನಗರ, ಸಿರವಾರ ಹಾಗೂ ಮಾನ್ವಿಗಳಲ್ಲಿಯೂ ಮಳೆ ಸುರಿದಿದೆ.

ತುಂತುರು ಮಳೆ ಕಾರಣದಿಂದ ಜನಸಂಚಾರ ವಿರಳವಾಗಿ ಸುಗಮ ವ್ಯಾಪಾರ ನಡೆಯಲಿಲ್ಲ. ಹೂವು ಮತ್ತು ಹಣ್ಣಿನ ವ್ಯಾಪಾರಿಗಳು ಹೆಚ್ಚು ನಷ್ಟ ಅನುಭವಿಸಬೇಕಾಯಿತು. ಕೋವಿಡ್‌ ಕಾರಣದಿಂದ ಅನಗತ್ಯ ಸಂಚಾರವನ್ನು ಜನರು ಕಡಿಮೆ ಮಾಡಿದ್ದು, ಇದೀಗ ತಂಪು ಹವಾಮಾನ ಕಾರಣದಿಂದ ಕೇಂದ್ರ ಬಸ್‌ ನಿಲ್ದಾಣದಲ್ಲೂ ಪ್ರಯಾಣಿಕರು ವಿರಳವಾಗಿದ್ದರು. ಸರ್ಕಾರಿ ಬಸ್‌ಗಳು ಖಾಲಿಖಾಲಿ ಸಂಚರಿಸುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.