ADVERTISEMENT

ಪರಿಶಿಷ್ಟರ ಮಕ್ಕಳಿಗಿಲ್ಲ ಸರ್ಕಾರಿ ಸೌಲಭ್ಯ: ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:17 IST
Last Updated 17 ಅಕ್ಟೋಬರ್ 2025, 7:17 IST
ದೇವದುರ್ಗ ತಾಲ್ಲೂಕಿನ ಗಂಗಾ ನಾಯಕ ತಾಂಡ ಅಂಗನವಾಡಿ ಕೇಂದ್ರ ಸೋಮವಾರ ಮಧ್ಯಾನ 11 ಗಂಟೆ ಮುಚ್ಚಿರುವುದು.
ದೇವದುರ್ಗ ತಾಲ್ಲೂಕಿನ ಗಂಗಾ ನಾಯಕ ತಾಂಡ ಅಂಗನವಾಡಿ ಕೇಂದ್ರ ಸೋಮವಾರ ಮಧ್ಯಾನ 11 ಗಂಟೆ ಮುಚ್ಚಿರುವುದು.   

ದೇವದುರ್ಗ: ತಾಲ್ಲೂಕಿನ ಗಣೇಕಲ್(ಬಿ) ಗ್ರಾ.ಪಂ ವ್ಯಾಪ್ತಿಯ ಗಂಗಾ ನಾಯಕ ತಾಂಡಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯು ನಿರಂತರ ಗೈರಾಗಿರುವುದರಿಂದ ತಾಂಡಾ ನಿವಾಸಿಗಳ ಮಕ್ಕಳು ಪೌಷ್ಟಿಕ ಆಹಾರ ಸೇರಿದಂತೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ಸೌಲಭ್ಯಗಳಿಂದ ವಂಚತಿರಾಗುವಂತಾಗಿದೆ.

ಗಂಗಾ ನಾಯಕ ತಾಂಡದಲ್ಲಿ 100 ಕುಟುಂಬಗಳಿವೆ. 300ಕ್ಕೂ ಹೆಚ್ಚು ಜನರಿದ್ದಾರೆ. ಬಹುತೇಕರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ್ದಾರೆ. ತಾಂಡಾದಲ್ಲಿ 10ಕ್ಕೂ ಹೆಚ್ಚು ಗರ್ಭಿಣಿಯರು ಮತ್ತು 6ಕ್ಕೂ ಹೆಚ್ಚು ಬಾಣಂತಿಯರು ಮತ್ತು 6 ವರ್ಷದ ಒಳಗಿನ 40ಕ್ಕೂ ಹೆಚ್ಚು ಮಕ್ಕಳಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒದಗಿಸುವ ಪೌಷ್ಟಿಕ ಆಹಾರ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಕಾರ್ಯಕರ್ತೆ ಲಲಿತಾ ನಾಯಕ ದೇವದುರ್ಗ ಪಟ್ಟಣದಲ್ಲಿ ವಾಸವಾಗಿದ್ದು, ಸಹಾಯಕಿ ಯರಮರಸ್ ಗ್ರಾಮದಲ್ಲಿದ್ದಾರೆ. ತಿಂಗಳಲ್ಲಿ 2–3 ಬಾರಿ ಬಂದು ಕೇಂದ್ರ ತೆಗೆಯುತ್ತಾರೆ. ತಿಂಗಳಲ್ಲಿ ಒಂದು ಬಾರಿ ತಮಗೆ ಬೇಕಾದವರಿಗೆ ಪೌಷ್ಟಿಕ ಆಹಾರ ಮೊಟ್ಟೆ ವಿತರಿಸುತ್ತಾರೆ. ಸುದ್ದಿ ತಿಳಿದು ಮಾರನೇ ದಿನ ಕೇಂದ್ರಕ್ಕೆ ಫಲಾನುಭವಿಗಳು ಬಂದರೆ ಕೇಂದ್ರ ಬೀಗ ಹಾಕಿರುತ್ತದೆ. ಕಾರ್ಯಕರ್ತೆಯನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸುವುದಿಲ್ಲ. ಸಹಾಯಕಿಗೆ ಕರೆ ಮಾಡಿದರೆ ನನಗೆ ಗೊತ್ತಿಲ್ಲ ಎನ್ನುತ್ತಾರೆ ಎಂದು ನಿವಾಸಿಗಳಾದ ಭೀಮ ವಗ್ಗಾ, ಬಸವರಾಜ ಗಾಲಿ ಮಾಹಿತಿ ನೀಡಿದರು.

ADVERTISEMENT

ಸ್ಥಳೀಯ ಗ್ರಾಮ, ತಾಂಡ ನಿವಾಸಿಗರಿಗೆ ಸಕಾಲದಲ್ಲಿ ಸೌಲಭ್ಯ ಕಲ್ಪಿಸಲಿ ಎಂದು ಸರ್ಕಾರ ನೇಮಕಾತಿ ವೇಳೆ ಸ್ಥಳೀಯರಿಗೆ ಆದ್ಯತೆಯ ಮೇಲೆ ನೇಮಕ ಮಾಡಿಕೊಳ್ಳುತ್ತದೆ. ನೇಮಕವಾದ ನಂತರ ಅಂಗನವಾಡಿ ಕಾರ್ಯಕರ್ತೆಯರು ಸಮೀಪದ ಪಟ್ಟಣಗಳಲ್ಲಿ ವಾಸವಾಗುವುದರಿಂದ ಜನರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಸರ್ಕಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಚುಚ್ಚುಮದ್ದು ಮತ್ತು ಶಾಲಾ ಪೂರ್ವ ಶಿಕ್ಷಣವೂ ಮಕ್ಕಳಿಗೆ ಸಿಗುತ್ತಿಲ್ಲ. ಹೀಗಾಗಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಸೇವೆಯಿಂದ ವಜಾಗೊಳಿಸಿ, ಸ್ಥಳೀಯವಾಗಿ ಲಭ್ಯವಿರುವವರನ್ನು ನೇಮಿಸಬೇಕು’ ಎಂದು ವಕೀಲ ಶಿವರಾಜ ನಾಯಕ ಒತ್ತಾಯಿಸಿದರು.

ತಾಂಡದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ್ದು, ಕಾರ್ಯಕರ್ತೆ ಹಾಗೂ ಸಹಾಯಕಿಯು ಸರ್ಕಾರದ ಯೋಜನೆಗಳ ಮಾಹಿತಿ ಕುರಿತು ಜನರಿಗೆ ಮಾಹಿತಿ ನೀಡುವುದಿಲ್ಲ. ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ದೇವದುರ್ಗದ ತಾಲ್ಲೂಕು ಕಚೇರಿಗೆ ಹೋಗಬೇಕು. ಜನರಿಗೆ ಸಕಾಲದಲ್ಲಿ ಸೇವೆ ಒದಗಿಸದ ಇವರಿಬ್ಬರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಸೀತಾ ನಾಯಕ ಆಗ್ರಹಿಸಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಕೇಂದ್ರ ಮುಚ್ಚಿತು. ಮೇಲ್ವಿಚಾರಕಿ ಲಕ್ಷ್ಮೀ ಅವರನ್ನು ಸಂಪರ್ಕಿಸಿದಾಗ ನಮಗೆ ಮಾಹಿತಿ ಇಲ್ಲ. ವಿಚಾರಿಸಿ ಕ್ರಮ ಕೈಗೊಳ್ಳುತ್ತೆವೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ದೇವದುರ್ಗ ತಾಲ್ಲೂಕಿನ ಗಂಗಾ ನಾಯಕ ತಾಂಡ ಅಂಗನವಾಡಿ ಕೇಂದ್ರ ಮುಖ್ಯ ಗೇಟ್ ಮುಚ್ಚಿರುವುದು.
ತಾಯಿ ಕಾರ್ಡ್‌ ಅರ್ಜಿ ಸಲ್ಲಿಸಲು ಕೇಂದ್ರಕ್ಕೆ ಹೋದರೆ ದೇವದುರ್ಗಕ್ಕೆ ಬನ್ನಿ ಎಂದು ಕರೆಯುತ್ತಾರೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೌಲಭ್ಯ ಸಿಗುತ್ತಿಲ್ಲ
ರಮಾಬಾಯಿ ತಾಂಡ ನಿವಾಸಿ
ಕಾರ್ಯಕರ್ತೆ ಮತ್ತು ಸಹಾಯಕಿ ನಿರಂತರ ಗೈರಾಗಿದ್ದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದೆ. ಇಲಾಖೆ ಜವಾಬ್ದಾರಿ ಮರೆತ ಇಬ್ಬರನ್ನೂ ವಜಾಗೊಳಿಸಬೇಕು
ಶಿವರಾಜ ನಾಯಕ ವಕೀಲ ಬಿ. ಗಣೇಕಲ್
ಕಾರ್ಯಕರ್ತೆ ಮತ್ತು ಸಹಾಯಕಿ ನಿರಂತರ ಗೈರಾದ ಬಗ್ಗೆ ಮಾಹಿತಿಯಿಲ್ಲ. ವರದಿ ಪಡೆದುಕೊಂಡು ಕರ್ತವ್ಯ ಲೋಪ ಎಸಗಿದ್ದರೆ ಕ್ರಮ ಜರುಗಿಸುವೆ
ಮಾದವನಂದ ಸಿಡಿಪಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.