ಸಿಂಧನೂರು: ‘ಮುಖ್ಯ ರಸ್ತೆಗಳನ್ನು ಅತಿಕ್ರಮಿಸಿದ ಬೀದಿಬದಿ ವ್ಯಾಪಾರಿಗಳ ಡಬ್ಬಾ ಮತ್ತು ಶೆಡ್‍ಗಳನ್ನು ತೆರವು ಮಾಡಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಿಪಿಐಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು ಎಚ್ಚರಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಂಗಡಿ ಮತ್ತು ಶೆಡ್‍ಗಳನ್ನು ಹಾಕುವಾಗ ನಗರಸಭೆ, ತೋಟಗಾರಿಕೆ ಇಲಾಖೆ, ನೀರಾವರಿ ಇಲಾಖೆ, ಜೆಸ್ಕಾಂ ತಮ್ಮ ಆಸ್ತಿಗಳನ್ನು ರಕ್ಷಣೆ ಮಾಡಿಕೊಂಡಿಲ್ಲ. ವ್ಯಾಪಾರಿಗಳು ನಗರಸಭೆಗೆ ಪ್ರತಿನಿತ್ಯ ₹30ರಂತೆ ತೆರಿಗೆ ಪಾವತಿಸಿದ್ದಾರೆ. ವಿದ್ಯುತ್ ಇಲಾಖೆಯಿಂದ ಅಧಿಕೃತವಾಗಿ ವಿದ್ಯುತ್ ಪಡೆದು ಬಾಡಿಗೆ ಪಾವತಿಸಿದ್ದಾರೆ. ಈಗ ಒಮ್ಮಿಲೆ ಬಂದು ಬಡವರನ್ನು ಒಕ್ಕಲೆಬ್ಬಿಸಿದ್ದಾರೆ’ ಎಂದು ಆಪಾದಿಸಿದರು.
ತಾಲ್ಲೂಕು ಘಟಕದ ಸದಸ್ಯ ಶೇಕ್ಷಾಖಾದ್ರಿ ‘ನಗರಸಭೆ ಅಧಿಕಾರಿಗಳು 900 ಬೀದಿ ವ್ಯಾಪಾರಿಗಳ ಪಟ್ಟಿ ಮಾಡಿದ್ದಾರೆ. ಅವರೆಲ್ಲರಿಗೆ ದೇವರಾಜ ಅರಸು ಮಾರುಕಟ್ಟೆ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ, ಆಹಾರ ಇಲಾಖೆಯ ಗೋದಾಮು, ಜ್ಯೋತಿ ಮಹಿಳಾ ಸಮಾಜ ಸೇರಿದಂತೆ ಇನ್ನಿತರ ಸರ್ಕಾರಿ ಜಾಗದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ತಾಲ್ಲೂಕು ಸಮಿತಿ ಸದಸ್ಯರಾದ ಶರಣಮ್ಮ ಪಾಟೀಲ್, ರೇಣುಕಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.