ADVERTISEMENT

ರಾಯಚೂರು: ಬಿಗಿ ಮಾಡಿದರೂ ನಿಲ್ಲದ ಅಕ್ರಮ ಅಕ್ಕಿ ಸಾಗಣೆ

2021–22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲು

ನಾಗರಾಜ ಚಿನಗುಂಡಿ
Published 10 ಜೂನ್ 2022, 19:30 IST
Last Updated 10 ಜೂನ್ 2022, 19:30 IST
ಅಕ್ರಮವಾಗಿ ಪಡಿತರ ಅಕ್ಕಿ ಮೂಟೆಗಳನ್ನು ಸಾಗಿಸುವ ಲಾರಿಯನ್ನು ಮುದಗಲ್‌ ಠಾಣೆ ಪೊಲೀಸರು ಅಂಕಲಗಿ ಮಠ ಕ್ರಾಸ್‌ ಬಳಿ ಕಳೆದ ತಿಂಗಳು ವಶಕ್ಕೆ ಪಡದರು (ಫೈಲ್‌ ಚಿತ್ರ)
ಅಕ್ರಮವಾಗಿ ಪಡಿತರ ಅಕ್ಕಿ ಮೂಟೆಗಳನ್ನು ಸಾಗಿಸುವ ಲಾರಿಯನ್ನು ಮುದಗಲ್‌ ಠಾಣೆ ಪೊಲೀಸರು ಅಂಕಲಗಿ ಮಠ ಕ್ರಾಸ್‌ ಬಳಿ ಕಳೆದ ತಿಂಗಳು ವಶಕ್ಕೆ ಪಡದರು (ಫೈಲ್‌ ಚಿತ್ರ)   

ರಾಯಚೂರು: ಬಡವರಿಗಾಗಿ ಸರ್ಕಾರವು ಹಂಚುವ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ರವಾನಿಸುವವರ ವಿರುದ್ಧ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಪ್ರಕರಣಗಳನ್ನು ದಾಖಲಿಸುತ್ತಿದ್ದರೂ, ಅಕ್ರಮ ಸಾಗಣೆ ಮಾತ್ರ ಕೊನೆಯಾಗುತ್ತಿಲ್ಲ!

2021 ರ ಏಪ್ರಿಲ್‌ನಿಂದ 2022 ರ ಮಾರ್ಚ್‌ ಅಂತ್ಯದವರೆಗೂ ಜಿಲ್ಲೆಯ ವಿವಿಧೆಡೆ ಒಟ್ಟು 18 ಪ್ರಕರಣಗಳು ಪತ್ತೆಯಾಗಿವೆ. ಕನಿಷ್ಠ1.2 ಕ್ವಿಂಟಲ್‌ನಿಂದ ಗರಿಷ್ಠ 410 ಕ್ವಿಂಟಲ್‌ವರೆಗೂ ಅಕ್ರಮ ಅಕ್ಕಿ ಸಾಗಿಸುವವರನ್ನು ಆಹಾರ ಇಲಾಖೆ ಅಧಿಕಾರಿಗಳು ಹಿಡಿದಿದ್ದು, ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳನ್ನು ದಾಖಲಿಸಿದ್ದಾರೆ. ಒಟ್ಟು 15 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಪ್ರಕರಣಗಳ ಮುಂದುವರಿದಿವೆ.

2021–22ನೇ ನಡೆಸಿದ 18 ದಾಳಿಗಳಲ್ಲಿ ಒಟ್ಟು 1,276 ಕ್ವಿಂಟಲ್‌ ಅಕ್ಕಿ ಜಪ್ತಿಯಾಗಿದೆ. ಇದರ ಮೌಲ್ಯ ₹20.97 ಲಕ್ಷ. ಲಿಂಗಸುಗೂರು ತಾಲ್ಲೂಕಿನಲ್ಲಿ ಈ ಬಗ್ಗೆ ಜಾಗೃತಿ ವಹಿಸಿರುವ ಅಧಿಕಾರಿಗಳು ಜಿಲ್ಲೆಯಲ್ಲೆ ಅತಿಹೆಚ್ಚು ಐದು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ದೇವದುರ್ಗ ತಾಲ್ಲೂಕಿನ ಅಧಿಕಾರಿಗಳು ವರ್ಷದಲ್ಲಿ ಒಂದು ಪ್ರಕರಣ ಪತ್ತೆ ಮಾಡಿದ್ದಾರೆ. ಸಿಂಧನೂರು ತಾಲ್ಲೂಕಿನಲ್ಲಿ ಒಂದು, ರಾಯಚೂರು ತಾಲ್ಲೂಕಿನಲ್ಲಿ ಎರಡು, ಸಿರವಾರ ಮತ್ತು ಮಸ್ಕಿ ತಾಲ್ಲೂಕುಗಳಲ್ಲಿ ತಲಾ ಮೂರು, ಮಾನ್ವಿ ತಾಲ್ಲೂಕಿನಲ್ಲಿ ಎರಡು ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ADVERTISEMENT

’ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಅಕ್ಕಿ ಜಪ್ತಿ ಮಾಡಿ ಸಂಗ್ರಹಿಸಲಾಗಿದೆ. ಒಂದು ವರ್ಷದಿಂದ ತೆಗೆದಿರಿಸಲಾಗಿದ್ದು, ಶೀಘ್ರದಲ್ಲೆ ಹರಾಜು ಹಾಕಲಾಗುವುದು. ಹರಾಜಿನಿಂದ ಬರುವ ಮೊತ್ತವನ್ನು ನಿಯಮಾನುಸಾರ ಸರ್ಕಾರಕ್ಕೆ ಪಾವತಿಸಲಾಗುವುದು. ಸದ್ಯ ಅಕ್ರಮ ಅಕ್ಕಿ ಸಾಗಣೆಗೆ ಸಂಬಂಧಿಸಿದಂತೆ ಸುಮಾರು 30 ಪ್ರಕರಣಗಳು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ‘ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಅರುಣಕುಮಾರ ಸಂಗಾವಿ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

’ಬಡವರಿಗೆ ಸರ್ಕಾರ ಅಕ್ಕಿ ಹಂಚುತ್ತಿರುವುದು ಒಳ್ಳೆಯದು. ಆದರೆ, ಅಕ್ರಮ ಸಾಗಣೆ ಮತ್ತು ದುರ್ಬಳಕೆ ಆಗುವುದನ್ನು ತಡೆಯುವುದಕ್ಕೆ ಇನ್ನೂ ಬಿಗಿ ಯೋಜನೆ ರೂಪಿಸುವ ಅಗತ್ಯವಿದೆ. ಅಕ್ಕಿ ಪಡೆದುಕೊಂಡವರು ಮಾರಾಟ ಮಾಡದಂತೆ ಮತ್ತು ಅಕ್ರಮ ಅಕ್ಕಿ ಸಾಗಿಸುವವರಿಗೆ ವಿಧಿಸುವ ಶಿಕ್ಷೆ ಹೆಚ್ಚಿಸಲು ಸರ್ಕಾರ ಕ್ರಮ ವಹಿಸಬೇಕು‘ ಎನ್ನುತ್ತಾರೆ ರಾಯಚೂರಿನ ನಿವೃತ್ತ ಉಪನ್ಯಾಸಕ ತಾಯಪ್ಪ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.