ADVERTISEMENT

ಪರಿಣಾಮಕಾರಿ ಅನುಷ್ಠಾನದಿಂದ ಅಭಿವೃದ್ಧಿ

ಕಾರ್ಯಾಗಾರದಲ್ಲಿ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 10:04 IST
Last Updated 5 ಅಕ್ಟೋಬರ್ 2019, 10:04 IST
ರಾಯಚೂರಿನಲ್ಲಿ ಶುಕ್ರವಾರದಿಂದ ಆರಂಭವಾದ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ರೂಪುರೇಷೆಯ ಎರಡುದಿನಗಳ ಕಾರ್ಯಾಗಾರದಲ್ಲಿ ಯೋಜನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರದಿಂದ ಆರಂಭವಾದ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ರೂಪುರೇಷೆಯ ಎರಡುದಿನಗಳ ಕಾರ್ಯಾಗಾರದಲ್ಲಿ ಯೋಜನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಮಾತನಾಡಿದರು   

ರಾಯಚೂರು:ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ನೀರು ನಿರ್ವಹಣೆ ಸೇರಿ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ಆಯಾಮಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ತೆಗೆಯಲು ಸಾಧ್ಯವಾಗಲಿದೆ ಎಂದು ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಹೇಳಿದರು.

ರಾಯಚೂರು ವಿಜ್ಞಾನಗಳ ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹತ್ವಾಕಾಂಕ್ಷಿ ಜಿಲ್ಲೆಗಳಿಗೆ ಸಂಬಂಧಿಸಿದ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಹೆಚ್ಚಿನ ಪಾಲು ಈ ಕ್ಷೇತ್ರಗಳಿಗೆ ಮೀಸಲಿಡಲಾಗಿದೆ. ಪ್ರತಿ ಗ್ರಾಮದಲ್ಲೂ ಆರೋಗ್ಯ ಸೇವೆ ಒದಗಿಸಬೇಕಿದೆ. ಹೊಸ ಕಾಯ್ದೆಯ ಪ್ರಕಾರ ವೈದ್ಯ ಪದವಿ ಮುಗಿಸಿದವರು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು. ಖಾಲಿ ಹುದ್ದೆಗಳ ಭರ್ತಿ ಮಾಡಲಾಗುತ್ತಿದ್ದು, ಇದರಿಂದ ತಜ್ಞ ವೈದ್ಯರ ಹುದ್ದೆ ಭರ್ತಿಯಾಗಲಿವೆ. ಅಲ್ಲದೆ ಆಸ್ಪತ್ರೆಗಳಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದರು.

ADVERTISEMENT

ಎಲ್ಲ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತರಬೇಕು. ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ರಾಯಚೂರಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಕೋರಿದರು.

ವೈದ್ಯರ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿಲ್ಲ. ವೈದ್ಯಕೀಯ ಸಂಘಗಳ ಸಹಾಯ ಪಡೆದು ಸೇವೆಗೆ ಮುಂದಾಗಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕ್ರಮ ಜರುಗಿಸಲಾಗಿದ್ದು, ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗುತ್ತದೆ. ಶಾಲಾ– ಕಾಲೇಜುಗಳಲ್ಲಿ ಶಿಕ್ಷಣದ ಜೊತೆಗೆ ಕೌಶಲ ತರಬೇತಿ ಕೇಂದ್ರಗಳನ್ನು ಮಾಡಬೇಕು. ಇದಕ್ಕೆ ಅನುದಾನ ತಂದುಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಆರೋಗ್ಯ ಸುಧಾರಣೆಗೆ ರಾಜ್ಯ ಸರ್ಕಾರದಿಂದ ಸಾಧ್ಯವಾದಷ್ಟು ಮಾಡಲಾಗುತ್ತದೆ. ಇನ್ನಷ್ಟು ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಯೋಜನೆಯಡಿ ಆಯ್ಕೆಯಾಗಿರುವ ರಾಯಚೂರು ಮತ್ತು ಯಾದಗಿರಿಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ ಹಾಗೂ ಕೌಶಲ್ಯಾಭಿವೃದ್ಧಿಗೆ ನಿಗದಿ ಮಾಡಿರುವ ಸೂಚ್ಯಂಕಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರ್ಯಾಗಾರದಲ್ಲಿ ಮಾಹಿತಿ ಪಡೆದು, ಮುನ್ನುಗ್ಗಬೇಕಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ವೈದ್ಯರಿಗೆ ಮೂಲ ಸೌಕರ್ಯ ಒದಗಿಸಬೇಕು. ಅವರಿಗೆ ರಕ್ಷಣೆ ಕೂಡ ಒದಗಿಸುವುದು ಅಗತ್ಯವಾಗಿದ್ದು. ಆರೋಗ್ಯ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಸಹಾಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿಯೇ ಮನೆ ಒದಗಿಸಲು ಕೇಂದ್ರದಲ್ಲಿ ಈಗಾಗಲೇ ಚರ್ಚೆಯಾಗುತ್ತಿದ್ದು, ಶೀಘ್ರದಲ್ಲಿ ಸುತ್ತೋಲೆ ಹೊರಬೀಳಲಿದೆ. ಆರೋಗ್ಯ ಸುಧಾರಣೆ ಪ್ರಮುಖ ಆದ್ಯತೆಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷೀ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆಗೆ ಸಕಲ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಯಾದಗಿರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರನಾಯಕ್, ಕಲಬುರ್ಗಿ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್‌, ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶಕುಮಾರ್, ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಲಕ್ಷ್ಮೀಕಾಂತರೆಡ್ಡಿ, ಶಿಲ್ಪಾ ಶರ್ಮಾ, ಡಾ.ಬಿ.ಆರ್.ಮಮತಾ, ಜೈಮಾಂತಪ್ಪ, ಕ್ರಿಸ್ತನ್‌ ಕಾಂತರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.