ADVERTISEMENT

ಮಾನ್ವಿ: ವಾಂತಿ ಭೇದಿಗೆ ಕಾಲುವೆಯ ಕಲುಷಿತ ನೀರು ಕಾರಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 18:31 IST
Last Updated 4 ಜುಲೈ 2022, 18:31 IST
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ವಲ್ಕಂದಿನ್ನಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುವ ಆರ್‌ಡಿಎಸ್‌ ಕಾಲುವೆ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ವಲ್ಕಂದಿನ್ನಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುವ ಆರ್‌ಡಿಎಸ್‌ ಕಾಲುವೆ   

ಮಾನ್ವಿ (ರಾಯಚೂರು ಜಿಲ್ಲೆ): ‘ತಾಲ್ಲೂಕಿನ ಗೋರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ಜನರಿಗೆ ಕಾಣಿಸಿದ ವಾಂತಿ ಭೇದಿಮತ್ತು ಮಹಿಳೆಯೊಬ್ಬರ ಸಾವಿಗೆ ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆಯ (ಆರ್‌ಡಿಎಸ್‌) ಕಾಲುವೆಯ ಕಲುಷಿತ ನೀರೇ ಕಾರಣ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆಂಧ್ರಪ್ರದೇಶ ಗಡಿಭಾಗದ ತುಂಗಭದ್ರಾ ನದಿಪಾತ್ರದಲ್ಲಿರುವ ಈ ಗ್ರಾಮಗಳಿಗೆ ಹೊಂದಿಕೊಂಡಿರುವ ಆರ್‌ಡಿಎಸ್‌ ಕಾಲುವೆಯ ನೀರನ್ನು ಗ್ರಾಮಗಳಿಗೆ ಪೂರೈಸಲಾಗುತ್ತದೆ. ಗ್ರಾಮಪಂಚಾಯಿತಿ ಪೈಪ್‌ಲೈನ್‌ ವ್ಯವಸ್ಥೆ ಮಾಡಿದೆ. ಆದರೆ, ನೀರು ಶುದ್ಧೀಕರಣ ವ್ಯವಸ್ಥೆ ಇಲ್ಲ. ವಲ್ಕಂದಿನ್ನಿ ಗ್ರಾಮದಲ್ಲಿ 15 ವರ್ಷಗಳ ಹಿಂದೆಯೇ ಎರಡು ಓವರ್ ಹೆಡ್‌ಟ್ಯಾಂಕ್‌ ನಿರ್ಮಿಸಲಾಗಿದ್ದರೂ ಈವರೆಗೆ ಬಳಕೆಯಾಗಿಲ್ಲ!

‘ತುಂಗ ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದಾಗ, ಕಾಲುವೆಗೆ ನೀರು ಪೂರೈಸಲಾಗುತ್ತದೆ. ಆದರೆ, ಈಚೆಗೆ ಕಾಲುವೆಗೆ ನೀರು ಹರಿಯದ ಕಾರಣ ಕಲುಷಿತ ನೀರು ಸಂಗ್ರಹವಾಗಿತ್ತು. ಅದೇ ನೀರು ಪೂರೈಕೆಯಾಗಿದೆ. ನೀರು ಪೂರೈಸುವ ಮುನ್ನ ಅದರ ಶುದ್ಧತೆಯನ್ನು ಯಾರೂ ಸಹ ಪರಿಶೀಲಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರಸ್ವಾಮಿ ವಲ್ಕಂದಿನ್ನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಪೂರೈಸಿ, ಸಮರ್ಪಕವಾಗಿ ನಿರ್ವಹಿಸಬೇಕು. ಶುದ್ಧವಾದ ನೀರನ್ನು ಕುಡಿಯುವಂತೆ ಜನರಲ್ಲಿ ಅರಿವು ಮೂಡಿಸಬೇಕು. ಆಗ ವಾಂತಿ–ಭೇದಿಯಂತಹ ಪ್ರಕರಣ ತಡೆಗಟ್ಟಬಹುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಗುರುಸ್ವಾಮಿ ಕಂಬಳತ್ತಿ ಹೇಳಿದರು.

ADVERTISEMENT

‘ಪತ್ರ ಬರೆಸಿಕೊಂಡ ಅಧಿಕಾರಿಗಳು’

‘ಮಾನ್ವಿ ತಾಲ್ಲೂಕಿನ ಜೂಕೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟ ಲಕ್ಷ್ಮಿ ವೀರೇಶ (26) ಸಾವಿಗೆ ಕಲುಷಿತ ನೀರು ಕಾರಣವಲ್ಲ’ ಎಂದು ಸಂಬಂಧಿಕರಿಂದ ಅಧಿಕಾರಿಗಳು ಸೋಮವಾರ ಪತ್ರವೊಂದನ್ನು ಬರೆಸಿಕೊಂಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

‘ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ’

‘ಅಸ್ವಸ್ಥಗೊಂಡ 40 ಜನರಲ್ಲಿ ಕೆಲವರು ಚೇತರಿಸಿಕೊಂಡಿದ್ದಾರೆ. ವಲ್ಕಂದಿನ್ನಿ ಗ್ರಾಮದ 11 ಮತ್ತು ಜೂಕೂರು ಗ್ರಾಮದ 4 ಜನರಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶುದ್ಧ ಕುಡಿಯುವ ನೀರಿನ ಘಟಕದ ನೀರು ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಲು ಹೇಳಲಾಗಿದೆ’ ಎಂದು ಮಾನ್ವಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಹೇಳಿದರು.

‘ನಿರಂತರ ವಿದ್ಯುತ್ ಸಮಸ್ಯೆ’

‘ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ, ವಿದ್ಯುತ್ ಸಮಸ್ಯೆ ಕಾರಣ ಅವುಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಅಲ್ಲಿನ ನೀರು ಕುಡಿದರೆ ಕಾಲು ಬೇನೆ, ಕೀಲು ನೋವು ಮತ್ತಿತರ ಕಾಯಿಲೆ ಬರುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಹೀಗಾಗಿ ಬಹುತೇಕ ಜನರು ಕಾಲುವೆಯಿಂದ ಪೂರೈಕೆಯಾಗುವ ನೀರನ್ನೇ ಕುಡಿಯುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.