ADVERTISEMENT

ಕೋವಿಡ್‌ ಸಂಕಷ್ಟದಲ್ಲಿ ದರ ಏರಿಕೆ ಬಿಸಿ

ಬೇಡಿಕೆ ಹೆಚ್ಚಳದ ಅವಕಾಶ ಬಳಸಿಕೊಳ್ಳುತ್ತಿರುವ ವ್ಯಾಪಾರಿಗಳು

ನಾಗರಾಜ ಚಿನಗುಂಡಿ
Published 30 ಮೇ 2021, 13:12 IST
Last Updated 30 ಮೇ 2021, 13:12 IST
ರಾಯಚೂರಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿರುವ ಕಿರಾಣಿ ಅಂಗಡಿಗಳಲ್ಲಿ ದಿನಸಿ ಖರೀದಿಸುತ್ತಿರುವ ಜನರು
ರಾಯಚೂರಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿರುವ ಕಿರಾಣಿ ಅಂಗಡಿಗಳಲ್ಲಿ ದಿನಸಿ ಖರೀದಿಸುತ್ತಿರುವ ಜನರು   

ರಾಯಚೂರು: ಆಹಾರಧಾನ್ಯಗಳು, ತರಕಾರಿಗಳು, ಕಟ್ಟಡ ಸಾಮಗ್ರಿಗಳು, ಕೋಳಿ, ಕುರಿ ಹಾಗೂ ಮೊಟ್ಟೆಗಳು ಜನರ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದಿರುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರುವುದನ್ನು ಅವಕಾಶ ಮಾಡಿಕೊಳ್ಳುತ್ತಿರುವ ಬಹುತೇಕ ವ್ಯಾಪಾರಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಕೋವಿಡ್‌ ಮಹಾಮಾರಿಯಿಂದ ದುಡಿಮೆಯಿಲ್ಲದೆ ಜೀವ ಉಳಿಸಿಕೊಳ್ಳಲು ಮನೆಯಲ್ಲೇ ಉಳಿದಿರುವ ದಿನಗೂಲಿಗಳು, ಬಟ್ಟೆ ಅಂಗಡಿ, ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ದಿನದಿಂದ ದಿನಕ್ಕೆ ಬದುಕುವುದು ದುಬಾರಿಯಾಗುತ್ತಿದೆ. ಪ್ರತಿಯೊಂದಕ್ಕೂ ಲೆಕ್ಕ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಮಧ್ಯಮ ವರ್ಗದವರ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಬಯಸಿದ್ದನ್ನು ತಿಂದುಂಡು ಮನೆಯಲ್ಲಿ ಹಾಯಾಗಿ ಇರೋಣ ಅಂದುಕೊಳ್ಳುತ್ತಿದ್ದವರು ದರ ಏರಿಕೆಯಿಂದಾಗಿ ಚಿಂತೆಗೆ ಬಿದ್ದಿದ್ದಾರೆ. ಆದರೆ, ಲಾಕ್‌ಡೌನ್‌ನಲ್ಲಿ ತಗ್ಗಿದ ಲಾಭವನ್ನು ಒಮ್ಮೆಲೆ ಬಾಚಬೇಕೆನ್ನುವ ದುರಾಸೆಗೆ ಕೆಲವು ಚಿಲ್ಲರೆ ವ್ಯಾಪಾರಿಗಳು ಬಿದ್ದಂತಿದೆ.

ಬೇಳೆಕಾಳು, ಅಕ್ಕಿ, ಅಡುಗೆ ಎಣ್ಣೆ ಸೇರಿದಂತೆ ಆಹಾರಧಾನ್ಯಗಳ ಸಗಟು ದರದಲ್ಲಿ ₹5 ರಿಂದ ₹10 ರಷ್ಟು ವ್ಯಾತ್ಯಾಸವಾಗಿದೆ. ಸರ್ದಾರ್ ವಲ್ಲಭಬಾಯ್‌ ಪಟೇಲ್‌ ವೃತ್ತ ಹಾಗೂ ಎಪಿಎಂಸಿ ಕಿರಣಾ ಬಜಾರ್‌ನಲ್ಲಿ ದರಗಳು ಅಷ್ಟೊಂದು ವ್ಯತ್ಯಾಸವಿಲ್ಲ. ಆದರೆ ಬಡಾವಣೆಗಳಲ್ಲಿರುವ ಕಿರಣಾ ಅಂಗಡಿಗಳಲ್ಲಿ ಭಾರಿ ವ್ಯತ್ಯಾಸವಿದೆ. ಸಗಟು ಅಂಗಡಿಗಳಿಂದ ಅವರು ಸರಕು ಪಡೆಯುವುದಕ್ಕೆ ಅನುಭವಿಸುತ್ತಿರುವ ತೊಂದರೆಯನ್ನು ಗ್ರಾಹಕರ ಮೇಲೆ ದರದ ರೂಪದಲ್ಲಿ ವರ್ಗಾಯಿಸುತ್ತಿದ್ದಾರೆ.

ADVERTISEMENT

ತರಕಾರಿ ದರಗಳನ್ನು ಜಿಲ್ಲಾಡಳಿತದಿಂದ ನಿಗದಿ ಮಾಡಿದ್ದರೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ನಿಂತಿಲ್ಲ. ‘ಎಷ್ಟೇ ದರ ಕಡಿಮೆ ಮಾಡಿ ಹೇಳಿದರೂ ಜನರು ಚೌಕಾಸಿ ಮಾಡುತ್ತಾರೆ. ಹೀಗಾಗಿ ಹೇಳುವಾಗಲೇ ಒಂದಿಷ್ಟು ಹೆಚ್ಚಿಗೆ ಹೇಳಿ, ಕಡಿಮೆ ಬೆಲೆ ಮಾರಾಟ ಮಾಡುತ್ತೇವೆ’ ಎಂದು ಕೆಲವು ವ್ಯಾಪಾರಿಗಳು ದರ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಕಾಲು ಕೆಜಿ ತರಕಾರಿಗೆ ಯಾರೂ ಚೌಕಾಸಿಗೆ ಇಳಿಯುವುದಿಲ್ಲ. ಒಂದು ಕೆಜಿ ಖರೀದಿಸುವ ಆಲೂಗಡ್ಡೆ, ಟೊಮೆಟೊ, ಸವತೆಕಾಯಿ, ಹೂಕೋಸು, ಎಲೆಕೋಸು, ಈರುಳ್ಳಿಯಂತಹ ಕೆಲವು ತರಕಾರಿಗಳಿಗೆ ಮಾತ್ರ ಚೌಕಾಸಿ ಮಾಡುತ್ತಾರೆ.

‘ಎಲ್ಲ ರೀತಿಯ ದರಗಳನ್ನು ನಿಯಂತ್ರಿಸುವುದು ಜಿಲ್ಲಾಡಳಿತದ ಕೈಯಲ್ಲಿದೆ. ಮೂರು ದಿನಕ್ಕೊಮ್ಮೆ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುತ್ತದೆ. ಯಾರೂ ದರ ಹೆಚ್ಚಿಸಿದ್ದಾರೆ ಎಂಬುದನ್ನು ಗುಪ್ತವಾಗಿ ಪರಿಶೀಲಿಸುವ ಕೆಲಸ ಮಾಡಬೇಕು. ಅಧಿಕಾರಿಗಳನ್ನು ಯಾಮಾರಿಸಿ ಜನರಿಂದ ಹಣ ಸುಲಿಗೆ ಮಾಡುವ ವ್ಯಾಪಾರಿಗಳು ಹೆಚ್ಚಾಗಿದೆ. ಜನರಿಗೆ ಹೊರೆ ಮಾಡದಂತೆ ಪ್ರಾಮಾಣಿಕವಾಗಗಿ ವ್ಯಾಪಾರ ಮಾಡುವವರೂ ಇದ್ದಾರೆ. ಆದರೆ, ಲಾಕ್‌ಡೌನ್‌ ಸಂದರ್ಭವನ್ನು ಬಹಳಷ್ಟು ವ್ಯಾಪಾರಿಗಳು ಬಳಸಿಕೊಳ್ಳುತ್ತಿದ್ದಾರೆ’ ಎಂದು ನಿವೃತ್ತ ಸೈನಿಕ ನಿಜಲಿಂಗಪ್ಪ ಕಾಲೋನಿ ನಿವಾಸಿ ಮಹಾಂತೇಶ ಅವರು ಹೇಳುವ ಮಾತಿದು.

‘ವಾರದಲ್ಲಿ ಎರಡು ದಿನ ಮಧ್ಯಾಹ್ನದವರೆಗೂ ಮಾತ್ರ ಅಂಗಡಿ ತೆರೆಯುವುದಕ್ಕೆ ಅವಕಾಶ ಮಾಡಿದ್ದಾರೆ. ಇಷ್ಟೇ ಸಮಯದಲ್ಲಿ ಎಪಿಎಂಸಿಗೆ ಹೋಗಿ ಸರಕುಗಳನ್ನು ತಂದು ಹೊಂದಿಸಿ ಮಾರಾಟ ಮಾಡಬೇಕು. ಕಿರಾಣಾ ಅಂಗಡಿ ಬಾಡಿಗೆ ಕೊಡಬೇಕು. ಕೆಲಸ ಮಾಡುವವರಿಗೆ ವೇತನ ಕೊಡಬೇಕು. ವ್ಯಾಪಾರಿಗಳಿಗೂ ಕಷ್ಟವಿದೆ’ ಎಂದು ವಾಸವಿನಗರ ಕಿರಾಣಿ ವ್ಯಾಪಾರಿ ಮಹಾದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.